ಲೂಧಿಯಾನ, ಮೇ 26 (DaijiworldNews/MS): ಅರುಣಾಚಲ ಪ್ರದೇಶ ಚೀನಾಗೆ ಸೇರಿದ ಭಾಗವಾಗಿದೆ ಹಾಗೂ ಶಾಸಕ ನಿನಾಂಗ್ ಎರಿಂಗ್ ಭಾರತೀಯರಲ್ಲ ಎಂಬ ಹೇಳಿಕೆ ನೀಡಿದ ಯುಟ್ಯೂಬರ್ ಪರಾಸ್ ಸಿಂಗ್ ಎಂಬಾತನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಪ್ಯಾರಾಸ್ ಅಫೀಶಿಯಲ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಈತ ಭಾನುವಾರವೊಂದು ವಿಡಿಯೋ ಪೋಸ್ಟ್ ಮಾಡಿದ್ದು ಅರುಣಾಚಲ ಪ್ರದೇಶದ ಕಾಂಗ್ರೆಸ್ ಶಾಸಕರ ವಿರುದ್ಧ ಜನಾಂಗೀಯ ಹೇಳಿಕೆ ಮತ್ತು ರಾಜ್ಯದ ಜನರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಇದು ಅರುಣಾಚಲ ಹಾಗೂ ದೇಶದ ಇತರ ಭಾಗದಲ್ಲಿ ಜನರ ಕೋಲಾಹಲಕ್ಕೆ ಕಾರಣವಾಗಿತ್ತು.
ಪರಾಸ್ ಸಿಂಗ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ 457ಕೆ ಚಂದಾದಾರರನ್ನು ಹೊಂದಿದ್ದಾನೆ. ಇನ್ನು ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಪಂಜಾಬ್ ಪೊಲೀಸರು ಪರಾಸ್ ಸಿಂಗ್ನನ್ನ ಪತ್ತೆ ಮಾಡಿದ್ದು ಆತನನ್ನ ವಶಕ್ಕೆ ಪಡೆದಿದ್ದಾರೆ. ಅರುಣಾಚಲ ಪ್ರದೇಶ ಪೊಲೀಸರು ಪಂಜಾಬ್ಗೆ ತಲುಪುತ್ತಿದ್ದಾರೆ. ಇದೊಂದು ಅಂತರಾಜ್ಯ ಪ್ರಕರಣವಾಗಿರೋದ್ರಿಂದ ತುರ್ತು ನ್ಯಾಯಾಂಗ ಬಂಧನಕ್ಕಾಗಿ ನಾನು ಲೂಧಿಯಾನಾದ ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಅರುಣಾಚಲ ಪ್ರದೇಶ ಪೊಲೀಸರು ಸಿಂಗ್ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರುಣಾಚಲ ಪ್ರದೇಶ ಸಿಎಂ ಪೇಮಾ ಖಂಡು ಸಹ ಈ ವಿಚಾರವಾಗಿ ಟ್ವೀಟಾಯಿಸಿದ್ದು, ಅರುಣಾಚಲ ಪ್ರದೇಶದ ಜನರಲ್ಲಿ ದ್ವೇಷವನ್ನ ಪ್ರಚೋದಿಸುವ ವಿಡಿಯೋವನ್ನ ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಈತ ಸೋಮವಾರ ಪೋಸ್ಟ್ ಮಾಡಿದ ಮತ್ತೊಂದು ವೀಡಿಯೊದಲ್ಲಿ, ತನ್ನ ಅಭಿಪ್ರಾಯಗಳಿಗೆ ಕ್ಷಮೆಯಾಚಿಸಿದ್ದಾನೆ.