ನವದೆಹಲಿ, ಮೇ.26 (DaijiworldNews/PY): "ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 1 ಕೋಟಿ ಡೋಸ್ ಕೊರೊನಾ ಲಸಿಕೆ ದಾಸ್ತಾನು ಇದೆ. ಮುಂಬರುವ ದಿನಗಳಲ್ಲಿ ಇನ್ನೂ 1 ಲಕ್ಷ ಡೋಸ್ ಲಸಿಕೆ ಸರಬರಾಜು ಮಾಡಲಾಗುತ್ತದೆ" ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಲಸಿಕೆ ಹಂಚಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, "ಇಲ್ಲಿಯವರೆಗೆ ಉಚಿತ ಲಸಿಕೆ ನೀಡಿಕೆ ಕಾರ್ಯಕ್ರಮದಡಿ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಿಗೆ 22,00,59,880 ಡೋಸ್ ಲಸಿಕೆ ನೀಡಲಾಗಿದೆ" ಎಂದಿದೆ.
"ಈ ಪೈಕಿ ವ್ಯರ್ಥವಾದ ಲಸಿಕೆಗಳನ್ನು ಸೇರಿಸಿ ಒಟ್ಟು ಸುಮಾರು 20,13,74,636 ಡೋಸ್ ಲಸಿಕೆಗಳನ್ನು ಉಪಯೋಗಿಸಲಾಗಿದೆ. ಉಳಿದಂತೆ 1,77,52,594 ಡೋಸ್ ಲಸಿಕೆ ದಾಸ್ತಾನಿದೆ. ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 1 ಲಕ್ಷ ಡೋಸ್ ಲಸಿಕೆ ವಿತರಿಸಲಾಗುತ್ತದೆ" ಎಂದು ತಿಳಿಸಿದೆ.
"ಕೊರೊನಾ ನಿಯಂತ್ರಣಕ್ಕಾಗಿ ಲಸಿಕೆ ಪಡೆದುಕೊಳ್ಳುವುದು ಅವಶ್ಯಕ. ಕೊರೊನಾ ಪರೀಕ್ಷೆ, ಚಿಕಿತ್ಸೆ ಸೇರಿದಂತೆ ಸೋಂಕಿತರ ಪತ್ತೆ ಹಾಗೂ ಕೊರೊನಾ ಮಾರ್ಗಸೂಚಿಗಳ ಪಾಲನೆಯಿಂದ ಕೊರೊನಾ ಸೋಂಕು ನಿಯಂತ್ರಣ ಸಾಧ್ಯ" ಎಂದು ಮಾಹಿತಿ ನೀಡಿದೆ.