ಬೆಂಗಳೂರು, ಮೇ.26 (DaijiworldNews/PY): "ಲಸಿಕೆ ನೀಡುವಿಕೆಯಲ್ಲಿ ಖಾಸಗಿ ಆಸ್ಪತ್ರೆಯೊಂದಿಗೆ ಸೇರಿದ ಸಂಸದ ತೇಜಸ್ವಿ ಸೂರ್ಯ ವ್ಯಾಕ್ಸಿನ್ ಬ್ಲ್ಯಾಕಿಂಗ್ ದಂಧೆ ನಡೆಸಿದ್ದಾರೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬೆಡ್ ಬ್ಲಾಕಿಂಗ್ ಹಗರಣದ ಬಿಜೆಪಿ ಪಕ್ಷದ ಮೆಡಿಕಲ್ ಭಯೋತ್ಪಾದಕ ಸತೀಶ್ ರೆಡ್ಡಿ ಆಪ್ತನ ಬಂಧನದಿಂದ ಸಾಭೀತಾಗಿದೆ. ತನ್ನ ಬೆಂಬಲಿಗರ ಮೂಲಕ ವಾರ್ ರೂಮ್ ಸಿಬ್ಬಂದಿಗಳನ್ನು ಬೆದರಿಸಿ, ನಿಯಂತ್ರಿಸಿ ದಂಧೆ ನಡೆಸುತ್ತಿದ್ದ ಕಿಂಗ್ ಪಿನ್ ಸತೀಶ್ ರೆಡ್ಡಿಯ ಬಂಧನದಿಂದ ಮಾತ್ರ ಪ್ರಕರಣ ಪೂರ್ಣ ಬಯಲಾಗಲು ಸಾಧ್ಯ" ಎಂದಿದೆ.
"ಬಿಜೆಪಿ ಕೇವಲ ಬೆಡ್ ಬ್ಲಾಕಿಂಗ್ ಒಂದೇ ಅಲ್ಲ, ಆಕ್ಸಿಜನ್ ಬ್ಲಾಕಿಂಗ್, ವ್ಯಾಕ್ಸಿನ್ ಬ್ಲಾಕಿಂಗ್, ರೆಮಿಡಿಸಿವಿರ್ ಬ್ಲಾಕಿಂಗ್ನ್ನೂ ನಡೆಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಲಸಿಕೆ ನೀಡುವಿಕೆಯಲ್ಲಿ ಖಾಸಗಿ ಆಸ್ಪತ್ರೆಯೊಂದಿಗೆ ಸೇರಿದ ಸಂಸದ ತೇಜಸ್ವಿ ಸೂರ್ಯ ವ್ಯಾಕ್ಸಿನ್ ಬ್ಲ್ಯಾಕಿಂಗ್ ದಂಧೆ ನಡೆಸಿದ್ದಾರೆ" ಎಂದು ಕಿಡಿಕಾರಿದೆ.
"ತಮ್ಮ ಹಗರಣ ಮುಚ್ಚಿಕೊಳ್ಳಲು ಅಮಾಯಕ ವಾರ್ ರೂಮ್ ಸಿಬ್ಬಂದಿಗಳ ಹೆಸರನ್ನು ಬಳಸಿ ಕೋಮು ಬಣ್ಣ ನೀಡಲು ಮುಂದಾಗಿದ್ದ ಸಂಸದ ತೇಜಸ್ವಿ ಸೂರ್ಯ ಈಗ ಎಲ್ಲಿ ಅಡಗಿದ್ದಾರೆ? 17 ಸಿಬ್ಬಂದಿಗಳ ಉದ್ಯೋಗ, ಆತ್ಮಗೌರವ, ಮರ್ಯಾದೆಯನ್ನು ಕಿತ್ತುಕೊಂಡ ಎಳೆ ಸಂಸದನಿಗೆ ಪಶ್ಚಾತಾಪ ಇಲ್ಲವೇ? ಅವರಿಗಾದ ನಷ್ಟಕ್ಕೆ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡುವರಾ ಈಗ?" ಎಂದು ಕೇಳಿದೆ.
"ಕರೋನಾ ಕಾಲಘಟ್ಟವನ್ನು ಬಿಜೆಪಿ ನಿರ್ಲಜ್ಜವಾಗಿ, ಅಮಾನವೀಯವಾಗಿ ತನ್ನ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿದೆ. 1ನೇ ಅಲೆಯಲ್ಲಿ ಬೆಡ್ ಬಾಡಿಗೆ ಹಗರಣ, 2ನೇ ಅಲೆಯಲ್ಲಿ ಬೆಡ್ ಬ್ಲಾಕಿಂಗ್ ಹಗರಣ ಜನ ಬೀದಿಯಲ್ಲಿ ನರಳಿ ಸಾಯುತ್ತಿರುವಾಗ ಬಿಜೆಪಿ ತನಗೆ ಸಿಕ್ಕ ಅಧಿಕಾರವನ್ನು ಭ್ರಷ್ಟಾಚಾರದ ಮೆಡಿಕಲ್ ಭಯೋತ್ಪಾದನೆಗೆ ಬಳಸಿಕೊಂಡಿದೆ" ಎಂದು ದೂರಿದೆ.