ಕೋಲ್ಕತ್ತಾ, ಮೇ 26 (DaijiworldNews/MS): ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಯಸ್' ಚಂಡಮಾರುತವು ಒಡಿಶಾದ ಭದ್ರಕ್ ಜಿಲ್ಲೆಯ ಬಾಲಸೋರ್ – ದಾಮ್ರಾ ಬಂದರು ಬಳಿ ಬುಧವಾರ ಬೆಳಿಗ್ಗೆ 9.15ಕ್ಕೆ ಭೂಮಿಗೆ ಬಂದು ಅಪ್ಪಳಿಸಿದೆ. ಈ ಚಂಡಮಾರುತವೂ ಕಡಲತೀರಕ್ಕೆ ಅಪ್ಪಳಿಸುವ ಪ್ರಕ್ರಿಯೆ ನಾಲ್ಕು ಗಂಟೆ ಕಾಲ ಮುಂದುವರೆಯಲಿದೆ.
ಪ್ರತಿ ಗಂಟೆಗೆ ಸುಮಾರು 130ರಿಂದ 155 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಹವಾಮಾನ ಇಲಾಖೆ ಈ ಮೊದಲು ಬಿರುಗಾಳಿಯು ಪ್ರತಿ ಗಂಟೆಗೆ 155-165 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ ಎಂದು ಅಂದಾಜಿಸಿತ್ತು. ಆದರೆ, ಚಂಡಮಾರುತ ಅಪ್ಪಳಿಸುವ ಸಂದರ್ಭದಲ್ಲಿ ತೀವ್ರತೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ
ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಇನ್ನು ಮೂರರಿಂದ ನಾಲ್ಕು ಗಂಟೆ ಒಳಗೆ ಪೂರ್ಣಗೊಳ್ಳುತ್ತದೆ. ಬಾಲಾಸೋರ್ ಮತ್ತು ಭದ್ರಕ್ ಜಿಲ್ಲೆಯಲ್ಲಿ ಅಪಾರ ಪರಿಣಾಮ ಬೀರಲಿದೆ' ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪಿ.ಕೆ. ಜೆನಾ ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಬೆಳಿಗ್ಗೆ 5 ಗಂಟೆವರೆಗೆ ಒಡಿಶಾದ ಭುವನೇಶ್ವರ್ ವಿಮಾನ ನಿಲ್ದಾಣ ಹಾಗೂ ಪಶ್ಚಿಮ ಬಂಗಾಳದ ಕೋಲ್ಕತಾ, ದುರ್ಗಾಪುರ ವಿಮಾನ ನಿಲ್ದಾಣ ಬಂದ್ ಆಗಿದ್ದು, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಎನ್.ಡಿ.ಆರ್.ಎಫ್ ನ 115 ತಂಡಗಳು ರಕ್ಷಣಾ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ.
ಈಗಾಗಲೇ ಸುಮಾರು 5.80 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಸುಮಾರು 80 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಚಂಡಮಾರುತದ ಪರಿಣಾಮ ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವಿಗೀಡಾಗಿದ್ದು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಾದ ಪೂರ್ವ ಮಿದ್ನಾಪುರ ಮತ್ತು ದಕ್ಷಿಣ 24 ಪರಗಣದ ಹಲವು ಪ್ರದೇಶಗಳು ಜಲಾವೃತಗೊಂಡಿವೆ.