ನವದೆಹಲಿ, ಮೇ 26 (DaijiworldNews/MS): ಕೊರೊನಾದಿಂದ ತಂದೆ-ತಾಯಿಯನ್ನು ಕಳೆದುಕೊಂಡು ದೇಶಾದ್ಯಂತ ಏ.1 ರಿಂದ ಇಲ್ಲಿಯವರೆಗೆ 577 ಮಕ್ಕಳು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ಹೇಳಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವರದಿಗಳನ್ನು ಉಲ್ಲೇಖಿಸಿದ ಅವರು 2021 ಏಪ್ರಿಲ್ 1ರಿಂದ ಮೇ 25 ರ ಮಧ್ಯಾಹ್ನ 2 ಗಂಟೆಯವರೆಗೆ ಪೋಷಕರನ್ನು ಕಳೆದುಕೊಂಡ 577 ಮಕ್ಕಳನ್ನು ವರದಿ ಮಾಡಲಾಗಿದೆ. ಈ ಮಕ್ಕಳನ್ನು ಎಂದಿಗೂ ಕೈಬಿಡಲಾಗಿಲ್ಲ ಪ್ರತಿ ಮಗುವನ್ನು ರಕ್ಷಿಸಲು ಮತ್ತು ಪೋಷಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರ್ಎ.
ಕೇಂದ್ರವು, ರಾಜ್ಯ ಮತ್ತು ಜಿಲ್ಲೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಈ ಮೂಲಕ ಮಕ್ಕಳನ್ನು ರಕ್ಷಿಸುತ್ತಿದೆ ಸದ್ಯ ಜಿಲ್ಲೆಯ ಅಧಿಕಾರಿಗಳು ಅವರ ರಕ್ಷಣೆ ಮಾಡುತ್ತಿದ್ದಾರೆ. ಮಕ್ಕಳಿಗೆ ಕೌನ್ಸಲಿಂಗ್ ಅಗತ್ಯವಿದ್ದರೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲು ತಂಡ ಸಿದ್ಧವಾಗಿದೆ. ಈ ಮಕ್ಕಳ ಕಲ್ಯಾಣಕ್ಕಾಗಿ ಹಣದ ಕೊರತೆ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೋವಿಡ್ ಅನಾಥರ ಮಕ್ಕಳ ಬಗ್ಗೆ ಮಾತನಾಡುತ್ತಿದ್ದ ಹೆಸರಾಂತ ಕಾರ್ಯಕರ್ತರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ(ಡಬ್ಲ್ಯುಸಿಡಿ) ಸಚಿವಾಲಯವು ಸಂಪರ್ಕಿಸಿದಾಗ, ಯಾವುದೇ ವಿವರಣೆಯನ್ನು ನೀಡಿಲ್ಲ ಎಂಬುದು "ದುರದೃಷ್ಟಕರ ಮತ್ತು ನೋವಿನ ಸಂಗತಿ" ಎಂದು ಮೂಲಗಳು ತಿಳಿಸಿವೆ.