ಚಂಡೀಗಡ, ಮೇ.26 (DaijiworldNews/PY): "ಹರಿಯಾಣದಲ್ಲಿ ಮೇ 24ರವರೆಗೆ 454 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಲಾಗಿದ್ದು, ಗುರುಗ್ರಾಮ ಜಿಲ್ಲೆಯಲ್ಲಿ 156 ಪ್ರಕರಣಗಳು ದಾಖಲಾಗಿವೆ" ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳಿವೆ.
ಸಾಂದರ್ಭಿಕ ಚಿತ್ರ
ಆರೋಗ್ಯ ಸಚಿವ ಅನಿಲ್ ವಿಜ್ ಅವರು ಬ್ಲ್ಯಾಕ್ ಫಂಗಸ್ಗೆ ಗುರಿಯಾದವರೆಲ್ಲಾ ಕೊರೊನಾ ರೋಗಿಗಳು ಅಥವಾ ಮಧುಮೇಹಿಗಳಲ್ಲ ಎನ್ನುವ ವಿಚಾರವನ್ನು ಗಮನಿಸಿದ್ದು, "ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವ ಅವಶ್ಯಕತೆ ಇದೆ" ಎಂದಿದ್ದಾರೆ.
"ಈವರೆಗೆ ವಿಶ್ಲೇಷಿಸಿದ 413 ಬ್ಲ್ಯಾಕ್ ಫಂಗಸ್ ಪ್ರಕರಣಗಳ ಪೈಕಿ 64 ಮಂದಿಯಲ್ಲಿ ಕೊರೊನಾ ಸೋಂಕಿಲ್ಲ, 79 ಮಂದಿ ಮಧುಮೇಹಿಗಳಲ್ಲ, 110 ಮಂದಿ ಸ್ಟೆರಾಯ್ಡ್ ಅನ್ನು ಬಳಸಿಲ್ಲ ಹಾಗೂ ಉಳಿದವರು ಆಕ್ಸಿಜನ್ನ ಬೆಂಬಲದಲ್ಲಿ ಇಲ್ಲ" ಎಂದು ಮಾಹಿತಿ ನೀಡಿದ್ದಾರೆ.
ಫರಿದಾಬಾದ್ನಲ್ಲಿ 55 ಪ್ರಕರಣಗಳು, ಪಾಣಿಪತ್ನಲ್ಲಿ 19, ಹಿಸಾರ್ನಲ್ಲಿ 95, ರೋಹ್ಟಕ್ ಹಾಗೂ ಸಿರ್ಸಾದಲ್ಲಿ ತಲಾ 27 ಹಾಗೂ ಅಂಬಾಲಾದಲ್ಲಿ 14 ಪ್ರಕರಣಗಳು ವರದಿಯಾಗಿವೆ.
ಮ್ಯೂಕರ್ ಮೈಕೊಸಿಸ್ ಎನ್ನುವುದು ಪರಿಸರದಲ್ಲಿ ನೈಸರ್ಗಿಕವಾಗಿ ಕಂಡುಬರುವ ಮ್ಯೂಕರ್ ಮೈಸೆಟ್ಸ್ ಎಂದು ಕರೆಯುವ ಶಿಲೀಂಧ್ರಗಳ ಗುಂಪಿನಿಂದ ಉಂಟಾಗುತ್ತದೆ. ಮೂಗಿನ ಮೂಲಕ ಇದು ಹರಡುತ್ತದೆ ಹಾಗೂ ಕಣ್ಣುಗಳು ಹಾಗೂ ದೇಹದ ಇತರೆ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.
"ಮೂತ್ರಪಿಂಡ ಕಾಯಿಲೆ ಸೇರಿದಂತೆ ಕೊರೊನಾ, ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಪಿತ್ತಜನಕಾಂಗ, ವಯೋ ಸಂಬಂಧಿ ಸಮಸ್ಯೆಗಳಿಗೆ ಔಷಧಿಗಳನ್ನು ಪಡೆಯುತ್ತಿರುವವರು ಮ್ಯೂಕರ್ ಮೈಕೊಸಿಸ್ಗೆ ತುತ್ತಾಗುವ ಸಾಧ್ಯತೆ ಅಧಿಕ. ಇಂತಹ ರೋಗಿಗಳಿಗೆ ಸ್ಟೆರಾಯ್ಡ್ ನೀಡಿದಲ್ಲಿ ಅವರ ರೋಗನಿರೋಧಕ ಶಕ್ತಿ ಇನ್ನಷ್ಟು ದುರ್ಬಲವಾಗುವ ಹಾಗೂ ಶಿಲೀಂಧ್ರವು ಅಭಿವೃದ್ದಿಯಾಗಲು ಅನುವು ಮಾಡಿಕೊಡುತ್ತದೆ" ಎಂದು ತಜ್ಞರು ತಿಳಿಸಿದ್ದಾರೆ.