ಬೆಂಗಳೂರು, ಮೇ.25 (DaijiworldNews/HR): ಸ್ಯಾಂಡಲ್ವುಡ್ನ ಹಿರಿಯ ನಟ, ರಂಗಭೂಮಿ ಕಲಾವಿದ ಕೃಷ್ಣೇಗೌಡ (80) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ಕೃಷ್ಣಗೌಡರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಬಳಿಕ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಶ್ವಾಸಕೋಶದಲ್ಲಿ ಇನ್ಫೆಕ್ಷನ್ ಕಾಣಿಸಿಕೊಂಡಿದ್ದ ಹಿನ್ನಲೆಯಲ್ಲಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇನ್ನು ಕರ್ನಾಟಕ ರಾಜ್ಯದ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ನಾಟಕಗಳಲ್ಲಿ ಅಭಿನಯಿಸುತ್ತಿ ಕೃಷ್ಣೇಗೌಡ ಸಿನಿರಂಗದಲ್ಲಿ ಪೋಷಕರ ಪಾತ್ರಗಳಲ್ಲಿ ಮಿಂಚಿ ಪೋಷಕ ಪಾತ್ರಕ್ಕಾಗಿ ರಾಜ್ಯ ಪ್ರಶಸ್ತಿ ಸಹ ಸಿಕ್ಕಿದೆ.
ಸಿನಿಮಾದೊಂದಿಗೆ ಕ್ರೀಡಾ ಕ್ಷೇತ್ರದಲ್ಲೂ ಹೆಸರು ಮಾಡಿದ್ದ ಅವರು ರಾಜ್ಯ ಮಟ್ಟದ ವಾಲಿಬಾಲ್ ಆಟಗಾರರಾಗಿದ್ದರು.
ಕೃಷ್ಣೇಗೌಡರ ನಿಧನಕ್ಕೆ ಚಿತ್ರರಂಗದ ಅನೇಕ ಹಿರಿಯ ನಟರು ಸಂತಾಪ ಸೂಚಿಸಿದ್ದಾರೆ.