ನವದೆಹಲಿ, ಮೇ25 (DaijiworldNews/MS): ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವ ಪ್ರಕರಣದ ಪ್ರಮುಖ ಆರೋಪಿ ಮತ್ತು ವಜ್ರದ ವ್ಯಾಪಾರಿ ನೀರವ್ ಮೋದಿ ಸಂಬಂಧಿ ಮೆಹುಲ್ ಚೋಕ್ಸಿಯು ಇದೀಗ ಆಂಟಿಗುವಾ ಮತ್ತು ಬಾರ್ಬುಡಾದಿಂದಲೂ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಭಾರತಕ್ಕೆ ಹಸ್ತಾಂತರಿಸುವ ಭಯದಿಂದ ಚೋಕ್ಸಿ ಕ್ಯೂಬಾಗೆ ಓಡಿಹೋಗಿರಬಹುದು ಎಂದು ಆಂಟಿಗುವಾ ಮತ್ತು ಬಾರ್ಬುಡಾದ ಮೂಲಗಳು ಸೋಮವಾರ ತಡರಾತ್ರಿ ಮಾಧ್ಯಮಗಳಿಗೆ ತಿಳಿಸಿವೆ.
ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವವನ್ನು ಪಡೆದಿರುವ ಚೋಕ್ಸಿ ಭಾನುವಾರ ಜಾಲಿ ಹಾರ್ಬರ್ ಪ್ರದೇಶದಲ್ಲಿ ವಾಹನ ಚಲಾಯಿಸುತ್ತಿರುವುದು ಕಂಡುಬಂದಿತ್ತು. ಭಾನುವಾರ ರಾತ್ರಿ ಊಟಕ್ಕೆ ಎಂದು ತೆರಳಿರುವ ಚೋಕ್ಸಿ ಆ ಬಳಿಕ ಪತ್ತೆಯಾಗಿಲ್ಲ. ನಂತರ, ಆತನ ವಾಹನ ಮಾತ್ರ ಪತ್ತೆಯಾಗಿದೆ ಆದರೆ ಚೋಕ್ಸಿಯ ಯಾವುದೇ ಸುಳಿವು ಕಂಡುಬಂದಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಳೀಯ ಪೊಲೀಸರು ಕೂಡ ಚೋಕ್ಸಿ ಕಾಣೆಯಾಗಿರುವ ಕುರಿತು ದೃಢಪಡಿಸಿದ್ದು, ಚೋಕ್ಸಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಅಟ್ಲೀ ರೊಡ್ನಿ ತಿಳಿಸಿದ್ದಾರೆ
ಭಾರತವು ಕ್ಯೂಬಾದೊಂದಿಗೆ ಹಸ್ತಾಂತರ ಒಪ್ಪಂದವನ್ನು ಹೊಂದಿಲ್ಲದ ಕಾರಣ ಚೋಕ್ಸಿ ಕ್ಯೂಬಾಕ್ಕೆ ಪಲಾಯನ ಮಾಡಿದ್ದಾರೆ ಎಂದು ಚೋಕ್ಸಿ ಆಪ್ತ ಸಹಾಯಕ ಗೋವಿನ್ ಅವರನ್ನು ಉಲ್ಲೇಖಿಸಿ ಅಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
2018ರ ಜನವರಿ ಮೊದಲ ವಾರದಲ್ಲಿ ಭಾರತದಿಂದ ಪಲಾಯನ ಮಾಡುವ ಮೊದಲೇ ಚೋಕ್ಸಿಯೂ 2017 ರಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಿಂದ ಪೌರತ್ವವನ್ನು ಪಡೆದುಕೊಂಡಿದ್ದರು. ಆ ಬಳಿಕ ಹಗರಣ ಬೆಳಕಿಗೆ ಬಂದಿತ್ತು. ಸದ್ಯ ನೀರವ್ ಮೋದಿ ಹಾಗೂ ಚೋಕ್ಸಿ ಇಬ್ಬರೂ ಸಿಬಿಐ ತನಿಖೆಯನ್ನು ಎದುರಿಸುತ್ತಿದ್ದಾರೆ