ಬೆಂಗಳೂರು, ಮೇ 24 (DaijiworldNews/MS): ದೇಶದಲ್ಲಿ ವ್ಯಾಕ್ಸಿನ್ ಕೊರತೆ ಎದುರಾಗಿದ್ದು, ಪ್ರಧಾನಿ ಮೋದಿ ಕಣ್ಣೀರ ನಾಟಕದ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, " ದೇಶದಲ್ಲಿ ಕೊರೊನಾ ಅಟ್ಟಹಾಸ ಮಾಡುತ್ತಿದ್ದು, ಇದರೊಂದಿಗೆ ದೇಶದಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚುತ್ತಿದೆ. ಸದ್ಯದ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಆಕ್ಸಿಜನ್ , ಔಷಧ, ಹಾಸಿಗೆಗಳ ಕೊರತೆ ಉಂಟಾಗಿದ್ದು, ಪ್ರಧಾನಿ ಮೋದಿ ಕಣ್ಣೀರ ನಾಟಕ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಚಪ್ಪಾಳೆ, ಜಾಗಟೆ, ದೀಪ, ತಟ್ಟೆ, ಎಂದು ನಾಟಕವಾಡಿದರು. ಇದೀಗಾ ಕಣ್ಣೀರ ನಾಟಕವಾಡಿ ಈಗ ಜನರನ್ನು ವಂಚಿಸಲು ಹೊರಟಿದ್ದಾರೆ. ಜಾಗಟೆ, ದೀಪ, ಕಣ್ಣೀರಿನಿಂದ ಕೊರೊನಾ ಓಡಿಸಲಾಗದು. ವಿದೇಶಗಳಿಗೆ ಲಸಿಕೆ ರಪ್ತು ಮಾಡಿ ದೇಶದ ಜನರು ಚಿಕಿತ್ಸೆ ಸಿಗದೇ ಲಸಿಕೆಯಿಲ್ಲದೇ ಸಾವನ್ನಪ್ಪುವ ಸ್ಥಿತಿಗೆ ತಂದಿಟ್ಟರು. ಇಂತಹ ನಾಟಕಗಳಿಗೆ ಜನ ಮೋಸ ಹೋಗಬಾರದು ಎಂದು ಹೇಳಿದರು.
ಕೊರೊನಾ ಲಾಕ್ ಡೌನ್ ನಲ್ಲಿ ಸಂಕಷ್ಟದಲ್ಲಿರುವವರಿಗೆ ಎಂದು ಸಿಎಂ ಯಡಿಯೂರಪ್ಪನವರು ಪ್ಯಾಕೆಜ್ ಘೋಷಣೆ ಮಾಡಿದ್ದಾರೆ ಈವರೆಗೂ ಯಾರಿಗೂ ತಲುಪಿಲ್ಲ. ಅಸಂಘಟಿತ ಕಾರ್ಮಿಕರು ಸೇರಿದಂತೆ ಹಲವರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಇದೇ ವೇಳೆ ಆರೋಪಿಸಿದರು.