ನವದೆಹಲಿ, ಮೇ 24 (DaijiworldNews/MS): ಮಹಾಮಾರಿ ಕೊರೋನಾ ದೇಶದಲ್ಲಿ ಮರಣ ಮೃದಂಗ ಭಾರಿಸುತ್ತಿದ್ದು ಈ ಹಿನ್ನಲೆಯಲ್ಲಿ ಟಾಟಾ ಸ್ಟೀಲ್ ತನ್ನ ನೌಕರರ ಮತ್ತು ಅವರ ಪರಿವಾರದ ಆರ್ಥಿಕ ಸುರಕ್ಷೆಗಾಗಿ ವಿಶೇಷ ಯೋಜನೆಯನ್ನು ಘೋಷಣೆ ಮಾಡಿದೆ. ಈ ಘೋಷಣೆಯು ನಿಜಕ್ಕೂ ಮಾದರಿಯಾಗಿದೆ ಎಂದು ಸಾರ್ವಜನಿಕರು ಕೊಂಡಾಡುತ್ತಿದ್ದಾರೆ.
ಟಾಟಾ ಸ್ಟೀಲ್ ಸುತ್ತೋಲೆಯಲ್ಲಿರುವ ಘೋಷಣೆ ಪ್ರಕಾರ ಕರೋನಾ ಮಹಾಮಾರಿಯಿಂದಾಗಿ ಮೃತಪಟ್ಟ ಕಂಪನಿಯ ನೌಕರನ ಪರಿವಾರ ಅಥವಾ ನಾಮಿನಿಗೆ ಮುಂದಿನ 60 ವರ್ಷದ ತನಕ ವೇತನ ನೀಡಲು ಸಂಸ್ಥೆ ನಿರ್ಧರಿಸಿದೆ.
ಈ ಸುತ್ತೋಲೆಯಲ್ಲಿ ಕಂಪನಿಯ ನೌಕರರ ಸಾಮಾಜಿಕ ಸುರಕ್ಷೆಗಾಗಿ ನೆರವು ನೀಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದೆ. ಕೊರೊನಾದಿಂದ ತಮ್ಮ ಸಂಸ್ಥೆಯ ಸಿಬ್ಬಂದಿ ಮೃತಪಟ್ಟರೆ ಈ ನೌಕರನ ಕುಟುಂಬಕ್ಕೆ ಮುಂದಿನ 60 ವರ್ಷದ ತನಕ ವೇತನವನ್ನು ನೀಡಲಿದೆ.
ವೇತನ ಮಾತ್ರವಲ್ಲದೆ ಮೆಡಿಕಲ್ ಬೆನಿಫಿಟ್ಸ್, ಹೌಸಿಂಗ್ ಫೆಸಿಲಿಟಿ ನೌಕರರ ಮಕ್ಕಳ ಗ್ರ್ಯಾಜುವೇಶನ್ ತನಕದ ವೆಚ್ಚವನ್ನೂ ಕಂಪನಿ ಭರಿಸಲಿದೆ. ಟಾಟಾ ಸ್ಟೀಲ್ ಮ್ಯಾನೇಜ್ಮೆಂಟ್ ಪ್ರಕಾರ ಕಂಪನಿ ಎಂದೆಂದಿಗೂ ತನ್ನ ನೌಕರರ ಹಾಗೂ ಪಾಲುದಾರರ ಹಿತಾಸಕ್ತಿಯನ್ನು ಕಾಪಾಡುತ್ತದೆ ಎಂದು ಹೇಳಿದೆ.