ಬೆಂಗಳೂರು, ಮೇ.24 (DaijiworldNews/HR): ಕರ್ನಾಟಕದಲ್ಲಿ 300 ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರು ಕಂಡುಬಂದಿದ್ದು, ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "300 ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಇದ್ದಾರೆ ಎಂದು ಪ್ರಾಥಮಿಕ ವರದಿ ಬಂದಿದ್ದು, ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, 17 ಮೆಡಿಕಲ್ ಕಾಲೇಜುಗಳಲ್ಲಿ ಕೂಡ ವ್ಯವಸ್ಥೆ ಇದೆ. ಆದರೆ ಔಷಧಿ ಸ್ವಲ್ಪ ಕೊರತೆ ಇದೆ" ಎಂದರು.
"ಇಡೀ ದೇಶದಲ್ಲಿ ವರ್ಷಕ್ಕೆ 100-200 ರಷ್ಟು ಜನರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಒಳಗಾಗುತ್ತಿದ್ದು, ಈಗ ರಾಜ್ಯದಲ್ಲೇ 300 ಕ್ಕೂ ಅಧಿಕ ಸೋಂಕಿತರಿರುವಾಗ ಔಷಧಿ ಕೊರತೆ ಕಂಡುಬರುತ್ತದೆ. ಇದಕ್ಕಾಗಿ ಔಷಧ ಉತ್ಪಾದನೆ ಹೆಚ್ಚಳ ಮಾಡಲಾಗಿದ್ದು,1 ಸಾವಿರಕ್ಕೂ ಹೆಚ್ಚು ವೈಲ್ ಗಳನ್ನು ಕಳುಹಿಸಿಕೊಡುವ ನಿರೀಕ್ಷೆಯೂ ಇದೆ. ಬ್ಲ್ಯಾಕ್ ಫಂಗಸ್ ಗೆ 1,150 ವೈಲ್ ಔಷಧಿ ರಾಜ್ಯಕ್ಕೆ ದೊರೆತಿದೆ. 20 ಸಾವಿರ ವೈಲ್ ಗೆ ಬೇಡಿಕೆ ಇಡಲಾಗಿದೆ" ಎಂದಿದ್ದಾರೆ.
ಇನ್ನು "ಈ ಸೋಂಕು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಮಾಡಲು ಸಮಿತಿ ರಚಿಸಿದ್ದು, ಈ ಸಮಿತಿ ವರದಿ ನೀಡಿದೆ. ಸ್ಟೀರಾಯಿಡ್ ಜೊತೆಗೆ ಹ್ಯುಮಿಡಿಫೈರ್ ನಲ್ಲಿ ನಲ್ಲಿ ನೀರು ಬಳಕೆ, ಐಸಿಯು ವೆಂಟಿಲೇಟರ್ ಅನ್ನು ಇನ್ನೊಬ್ಬರಿಗೆ ಬಳಸುವಾಗ, ಒಂದೇ ಮಾಸ್ಕ್ ದೀರ್ಘಕಾಲ ಬಳಕೆ, ಟ್ಯೂಬ್, ಹಾಸಿಗೆ ಮೊದಲಾದ ಮೂಲಗಳಿಂದ ಸೋಂಕು ಬರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ" ಎಂದು ತಿಳಿಸಿದ್ದಾರೆ.