ಚಿಕ್ಕಮಗಳೂರು, ಮೇ.24 (DaijiworldNews/HR): ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐ ಅರ್ಜುನ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಅವರು ಗೋಣಿಬೀಡು ಪಿಎಸ್ಐ ಅರ್ಜುನ್ರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಅಮಾನತು ಆದ ಪೊಲೀಸ್ ಅಧಿಕಾರಿ ಅರ್ಜುನ್ ವಿರುದ್ಧದ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.
ಕಿರುಗುಂದ ಗ್ರಾಮದ ವಿವಾಹಿತ ಮಹಿಳೆ ಆಕೆಯ ಪತಿಯ ನಡುವಿನ ಜಗಳ ವಿಚಾರಕ್ಕೆ ಗೋಣಿಬೀಡು ಪೋಲಿಸ್ ಠಾಣೆಯ ಪಿಎಸ್ಐ ಅರ್ಜುನ್ ಯಾವುದೇ ದೂರು ಇಲ್ಲದೇ ಗ್ರಾಮದ ದಲಿತ ಯುವಕ ಪುನೀತ್ (22) ಯುವಕನನ್ನು ಶಂಕೆಯ ಮೇಲೆ ಮೇ.10 ರಂದು ಠಾಣೆಗೆ ಕರೆತಂದಿದ್ದು ಮಹಿಳೆಯೊಂದಿಗೆ ಅನೈತಿಕ ಸಂಬಂಧ ಮತ್ತು ಆಕೆಯನ್ನು ಬಚ್ಚಿಟ್ಟಿರುವುದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ.
ಇನ್ನು ಇದಕ್ಕೆ ಒಪ್ಪದಿದ್ದಾಗ ಪಿಎಸ್ಐ ಅರ್ಜುನ್ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಕುಡಿಯಲು ನೀರು ಕೇಳಿದ್ದಕ್ಕೆ ಮೂತ್ರವನ್ನು ಕುಡಿಸಿದ್ದಾರೆ ಎಂದು ಯುವಕ ಆರೋಪಿಸಿದ್ದು, ಕಿರುಗುಂದ ಗ್ರಾಮಕ್ಕೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಚಾರಣೆ ನಡೆಸಿದ್ದು, ಇದೀಗ ಪಿಎಸ್ಐ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.