ಮಧುರೈ, ಮೇ 24 (DaijiworldNews/MS): ಕೊವೀಡ್ ಹರಡುವಿಕೆಯನ್ನು ನಿಯಂತ್ರಿಸುವ ಲಾಕ್ಡೌನ್ ಹಲವಾರು ಜನರ ವಿವಾಹದ ಯೋಜನೆಗಳನ್ನು ಮುಂದೂಡಿದೆ. ಆದರೆ ಮಧುರೈನ ನವ ದಂಪತಿಗಳು ಇದಕ್ಕೊಂದು ಪರಿಹಾರವನ್ನು ಕಂಡುಕೊಂಡಿದ್ದಾರೆ.
ಭೂಮಿ ಮೇಲೆ ಮದುವೆಯಾದರೆ ತಾನೇ ಈ ನಿಯಮ ಪಾಲಿಸಬೇಕು. ಆಕಾಶದಲ್ಲಿ ಮದುವೆಯಾದ್ರೆ ಕುಟುಂಬಸ್ಥರ ಮುಂದೆ ಮದುವೆಯ ಸವಿಘಳಿಗೆಯನ್ನು ಆನಂದಿಸಬಹುದು ಎಂದು ವಿಮಾನದಲ್ಲೇ ದಾಂಪತ್ಯ ಜೀವನ ಪ್ರವೇಶಿದ್ದಾರೆ.
ಮಧುರೈ ನಿವಾಸಿಗಳಾದ ರಾಕೇಶ್-ದಕ್ಷಿಣಾ ತಾವು ಹೊಸ ಜೀವನಕ್ಕೆ ಕಾಲಿಡುವ ಸಂದರ್ಭ, ಆತ್ಮೀಯರೆಲ್ಲರೂ ಸಮಾರಂಭದಲ್ಲಿ ಭಾಗವಹಿಸಿ ಹಾರೈಸಬೇಕೆಂದು ಬಯಸಿ ಭರ್ಜರಿ ಉಪಾಯವೊಂದು ಮಾಡಿದ್ದಾರೆ. ಮಧುರೈ-ಬೆಂಗಳೂರಿನಿಂದ ಸಂಪೂರ್ಣ ವಿಮಾನವನ್ನು ಕಾಯ್ದಿರಿಸಿದ ಇವರ ಕುಟುಂಬಸ್ಥರು ವಿಮಾನದಲ್ಲಿ 161 ಮಂದಿ ಉಪಸ್ಥಿತಿಯಲ್ಲಿ ಮಧುರೈ ಮೀನಾಕ್ಷಿ ಅಮ್ಮನ್ ದೇವಾಲಯದ ಮೇಲಿದ್ದಾಗ ಮದುವೆಯಾಗಿದ್ದಾರೆ.
ತಮಿಳುನಾಡು ಸರ್ಕಾರವು ಅಧಿಕೃತವಾಗಿ ಅನುಮತಿಸಿದ 50 ಅತಿಥಿಗಳಿಗಿಂತ ಮೂರು ಪಟ್ಟು ಹೆಚ್ಚು ಅತಿಥಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದು, ಅಂದುಕೊಂಡಂತೆ ಶುಭ ಮುಹೂರ್ತದಲ್ಲಿ ಅಲ್ಲಿದ್ದ ಬಂಧುಗಳು ಹೂವಿನ ಅರ್ಪಣೆ ಮಾಡುತ್ತಿದ್ದಂತೆ ವರ ವಧುವಿಗೆ ತಾಳಿ ಕಟ್ಟಿದ್ದಾನೆ, ವಿಡಿಯೋದಲ್ಲಿ ಗಟ್ಟಿಮೇಳ ರೆಕಾರ್ಡ್ ಕೂಡ ಕೇಳಬಹುದಾಗಿದೆ.
ಎರಡು ಗಂಟೆಗಳ ಕಾಲ ವಿಮಾನವನ್ನು ಬಾಡಿಗೆಗೆ ತೆಗೆದುಕೊಂಡು ಆಕಾಶದಲ್ಲಿ ಮದುವೆಯಾಗಿರುವ ಇವರ ವಿವಾಹದ ವಿಡಿಯೋ ಅನ್ನು ಸ್ನೇಹಿತರೊಬ್ಬರು ಶೇರ್ ಮಾಡಿದ್ದು, ಇದೀಗ ಭಾರಿ ವೈರಲ್ ಆಗಿದ್ದು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.