ಬೆಂಗಳೂರು, ಮೇ.24 (DaijiworldNews/HR): ಚುನಾವಣೆ ಕರ್ತವ್ಯದಲ್ಲಿ ದುಡಿದ ಮತ್ತು ವಿದ್ಯಾಗಮ ಯೋಜನೆ ಮೂಲಕ ಪಾಠ ಮಾಡಿದ ಕಲ್ಯಾಣ ಕರ್ನಾಟಕದ 145 ಶಿಕ್ಷಕರು ಕೊರೊನಾದಿಂದ ಮೃತಪಟ್ಟಿದ್ದಾರೆ. ಉಳಿದ ಕಡೆ ಮೃತಪಟ್ಟವರ ಲೆಕ್ಕ ಸಿಗುತ್ತಿಲ್ಲ. ಮೃತಪಟ್ಟ ಎಲ್ಲ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಕನಿಷ್ಠ 50 ಲಕ್ಷ ರೂ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "145ಕ್ಕೂ ಅಧಿಕ ಶಿಕ್ಷಕರು ಹೈದರಾಬಾದ್-ಕರ್ನಾಟಕದಲ್ಲಿ ಅಂದರೆ ಕಲ್ಯಾಣ ಕರ್ನಾಟಕದಲ್ಲಿ ಸಾವನ್ನಪ್ಪಿದ್ದಾರೆ. ಸರ್ಕಾರ ಕೊಟ್ಟ ಆದೇಶ ಪಾಲಿಸಿ ರಾಜ್ಯದಾದ್ಯಂತ ಇನ್ನೂ ಹಲವು ಶಿಕ್ಷಕರ ಪ್ರಾಣ ಹೋಗಿದೆ" ಎಂದರು.
"ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ಅವರನ್ನು ಚುನಾವಣೆ ಹಾಗೂ ಮತ್ಯಾವುದೋ ಕಾರಣಕ್ಕೆ ನಿಯೋಜಿಸಿದ ಸರ್ಕಾರವೇ ಈ ಸಾವುಗಳ ಸಂಪೂರ್ಣ ಹೊಣೆ ಹೊರಬೇಕು. ಇನ್ನೂ ಸಾವಿರಾರು ಶಿಕ್ಷಕರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ" ಎಂದಿದ್ದಾರೆ.
ಇನ್ನು "ಭವಿಷ್ಯ ಕಟ್ಟುವ ಶಿಕ್ಷಕರ ಬಗ್ಗೆ ಸರ್ಕಾರದ ಉಡಾಫೆ ಹಾಗೂ ದಿವ್ಯ ನಿರ್ಲಕ್ಷ್ಯ ಧೋರಣೆ ಬಗ್ಗೆ ನನ್ನ ಧಿಕ್ಕಾರವಿದ್ದು, ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.