ಕುಶಾಲನಗರ, ಮೇ.23 (DaijiworldNews/PY): ಕೊರೊನಾ ಸೋಂಕಿನಿಂದ ತಾಯಿಯನ್ನು ಕಳೆದುಕೊಂಡ ಪುಟ್ಟ ಬಾಲಕಿಯೊಬ್ಬಳು ಜಿಲ್ಲಾಡಳಿತ ಹಾಗೂ ಶಾಸಕರಿಗೆ ಪತ್ರ ಬರೆದಿದ್ದು, ಆಸ್ಪತ್ರೆಯಲ್ಲಿ ಕಳೆದುಹೋಗಿರುವ ನನ್ನ ತಾಯಿಯ ನೆನಪುಗಳು ಇರುವ ಮೊಬೈಲ್ ಪೋನ್ ಅನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾಳೆ.
ಜಿಲ್ಲಾಡಳಿತ ಹಾಗೂ ಶಾಸಕರಿಗೆ ಪತ್ರ ಬರೆದ ಕುಶಾಲನಗರದ ಹೃತೀಕ್ಷಾ, "ನನ್ನ ತಂದೆ ನವೀನ್, ತಾಯಿ ಪ್ರಭಾ ಹಾಗೂ ನನಗೂ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನನ್ನ ತಾಯಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ತಾಯಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ" ಎಂದು ತಿಳಿಸಿದ್ದಾಳೆ.
"ನಾನು, ತಂದೆ ಹೋ ಕ್ವಾರಂಟೈನ್ನಲ್ಲಿದ್ದು, ಹೊರಗೆ ಬಾರದ ಸ್ಥಿತಿಯಲ್ಲಿದ್ದೇವೆ. ನನ್ನ ತಂದೆ ದಿನಗೂಲಿ ನೌಕರರಾಗಿದ್ದು, ನೆರೆಹೊರೆಯವರಿಂದ ಸಹಾಯ ಪಡೆಯುತ್ತಿದ್ದೇವೆ" ಎಂದಿದ್ದಾಳೆ.
"ಕೊರೊನಾದಿಂದ ನನ್ನ ತಾಯಿ ಮೃತಪಟ್ಟಿದ್ದಾರೆ. ಅವರೊಂದಿಗಿದ್ದ ಮೊಬೈಲ್ ಅನ್ನು ಯಾರೋ ತೆಗೆದುಕೊಂಡಿದ್ದಾರೆ. ತಾಯಿಯನ್ನು ಕಳೆದುಕೊಂಡ ನಾನು ತಬ್ಬಲಿಯಾಗಿದ್ದೇನೆ. ಆ ಮೊಬೈಲ್ನಲ್ಲಿ ನನ್ನ ತಾಯಿಯ ನೆನಪುಗಳಿವೆ. ಹಾಗಾಗಿ ಮೊಬೈಲ್ ಸಿಕ್ಕಿದವರು ಕೂಡಲೇ ನೀಡಬೇಕು" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.
ಜಿಲ್ಲಾಡಳಿತ ಬಾಲಕಿಯ ಮನವಿಗೆ ಸ್ಪಂದಿಸಿದ್ದು, "ಪೊಲೀಸ್ ಆರೋಗ್ಯ ಇಲಾಖೆಯಿಂದ ಮೊಬೈಲ್ ಹುಡುಕಲು ಪ್ರಯತ್ನಿಸಲಾಗುತ್ತಿದೆ" ಎಂದು ಜಿಲ್ಲಾಡಳಿತ ಹೇಳಿದೆ.