ಮುಂಬೈ, ಮೇ.23 (DaijiworldNews/HR): ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಕರಾವಳಿ ಪ್ರದೇಶ ಸೇರಿದಂತೆ ಮೂರು ಸ್ಥಳಗಳಲ್ಲಿ 8 ಅಪರಿಚಿತ ಶವಗಳು ಪತ್ತೆಯಾಗಿದ್ದು, ಇದು ತೌಕ್ತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಮುಳುಗಿರುವ ಪಿ-305 ಬಾರ್ಜ್ನಲ್ಲಿದ್ದ ಸಂತ್ರಸ್ತರ ಮೃತದೇಹಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾಂಡ್ವಾದಲ್ಲಿ ಐದು, ಅಲಿಬಾಗ್ನಲ್ಲಿ ಎರಡು ಮತ್ತು ಮುರುಡ್ನಲ್ಲಿ ಒಂದು ಶವ ಪತ್ತೆಯಾಗಿದೆ.
ಇನ್ನು ಮೃತದೇಹಗಳ ಗುರುತು ಪತ್ತೆ ಮಾಡುವ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ನಾವು ಸ್ಥಳೀಯ ಅಧಿಕಾರಿಗಳು ಮತ್ತು ರಾಜ್ಯ ಪೊಲೀಸರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ಧೇವೆ ಎಂದು ರಾಯಗಡದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೌಕ್ತೆ ಚಂಡಮಾರುತದ ಹೊಡೆತದಿಂದ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ಪಿ305 ಬಾರ್ಜ್ ಶನಿವಾರ ಸಮುದ್ರದ ದಡದಲ್ಲಿ ಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ವೇಳೆ ಶನಿವಾರ ಮತ್ತೆ ಆರು ಶವಗಳು ಸಿಕ್ಕಿದ್ದು, ಈ ಮೂಲಕ ಬಾರ್ಜ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.