ಬೆಂಗಳೂರು, ಮೇ.23 (DaijiworldNews/PY): "ಎದುರಿಗೆ ಕೊರೊನಾ ವೈರಸ್ ಬಿಟ್ಟು ಹಿಂದಿನಿಂದ ಬೆಲೆ ಏರಿಕೆಯ ಚೂರಿ ಹಾಕುತ್ತಿದೆ ನರೇಂದ್ರ ಮೋದಿ ಸರ್ಕಾರ" ಎಂದು ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಎದುರಿಗೆ ಕೊರೊನಾ ವೈರಸ್ ಬಿಟ್ಟು ಹಿಂದಿನಿಂದ ಬೆಲೆ ಏರಿಕೆಯ ಚೂರಿ ಹಾಕುತ್ತಿದೆ ನರೇಂದ್ರ ಮೋದಿ ಸರ್ಕಾರ. ಕೊರೊನಾ ಒಂದೇ ದೇಶವನ್ನು ಕಾಡುತ್ತಿಲ್ಲ ಬಿಜೆಪಿಯ ತೆರಿಗೆ ಭಯೋತ್ಪಾದನೆಯೂ ಸಂಕಷ್ಟದಲ್ಲಿರುವ ಜನತೆಯನ್ನು ಕಾಡುತ್ತಿದೆ. ಆರ್ಥಿಕತೆ ನೆಲಕಚ್ಚಿರುವಾಗ ಇಂಧನತೈಲಗಳ ಬೆಲೆ ಏರಿಕೆ ಆರ್ಥಿಕ ಚಟುವಟಿಕೆಗಳಿಗೆ ಬಹುದೊಡ್ಡ ಪೆಟ್ಟು ಕೊಡಲಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
"ಸೇನಾಧಿಕಾರಿಯೊಬ್ಬರು ವೈದ್ಯಕೀಯ ಸವಲತ್ತುಗಳಿಗಾಗಿ ಚಿತ್ರನಟನ ಸಹಾಯ ಕೇಳುತ್ತಾರೆ ಎಂದರೆ ನರೇಂದ್ರ ಮೋದಿ ಸರ್ಕಾರದ ವೈಫಲ್ಯ ಎಷ್ಟಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ದೇಶದ ಜನತೆ ಸರ್ಕಾರದ ಬಗ್ಗೆ ಸಂಪೂರ್ಣ ನಂಬಿಕೆ ಕಳೆದುಕೊಂಡು ಜಗತ್ತಿನೆದುರು ಬೆತ್ತಲಾಗಿರುವಾಗ ಸುಳ್ಳಿನ ಟೂಲ್ಕಿಟ್ ರಾಜಕಾರಣಕ್ಕಿಳಿದಿದ್ದು ಹಾಸ್ಯಾಸ್ಪದ" ಎಂದು ಲೇವಡಿ ಮಾಡಿದೆ.
"ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತ ಯುವಕನಿಗೆ ಪೊಲೀಸ್ ಇನ್ಸ್ಪೆಕ್ಟರ್ ಮೂತ್ರ ಕುಡಿಸಿದ್ದು ಅತ್ಯಂತ ಕ್ರೂರ ಹಾಗೂ ರಾಜ್ಯವೇ ತಲೆ ತಗ್ಗಿಸುವ ಘಟನೆ ಇಂತಹ ಪ್ರಕರಣಗಳು ಬಿಜೆಪಿ ಆಳ್ವಿಕೆಯ ಯುಪಿ, ಮಧ್ಯಪ್ರದೇಶ, ಬಿಹಾರದಂತಹ ರಾಜ್ಯಗಳಿಂದ ಕೇಳಿಬರುತ್ತಿತ್ತು, ಈಗ ಕರ್ನಾಟಕದಲ್ಲೂ ಘಟಿಸಿದ್ದಕ್ಕೆ ದಲಿತ ವಿರೋಧಿ ಬಿಜೆಪಿಯೇ ಕಾರಣ" ಎಂದು ಆರೋಪಿಸಿದೆ.
"ಇಂತಹ ಅಮಾನವೀಯ ಕೃತ್ಯವೆಸಗಿದ ಪೊಲೀಸ್ ಇನ್ಸ್ಪೆಕ್ಟರ್ನನ್ನು ಅಮಾನತುಗೊಳಿಸದೆ, ವಿರೋಧ ತಣಿಸಲು ಕೇವಲ ವರ್ಗಾವಣೆ ಮಾಡಿದ್ದು ಬಿಜೆಪಿಯ ದಲಿತ ವಿರೋಧಿ ನೀತಿಗೆ ಸಾಕ್ಷಿ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೇ, ಕರ್ನಾಟಕಕ್ಕೆ ಈ ಯುಪಿ ಮಾಡೆಲ್ ಬೇಕಿಲ್ಲ. ಕೂಡಲೇ ಇನ್ಸ್ಪೆಕ್ಟರ್ನನ್ನು ಅಮನತುಗೊಳಿಸಿ ಉನ್ನತ ತನಿಖೆಗೆ ವಹಿಸಿ" ಎಂದು ಆಗ್ರಹಿಸಿದೆ.
"ಮನುವಾದಿ ಸಿದ್ಧಾಂತದ ಬಿಜೆಪಿ ದಲಿತ, ಹಿಂದುಳಿದ ವರ್ಗಗಳನ್ನು ಮತ್ತೊಮ್ಮೆ ಶೋಷಣೆಯ ವಾತಾವರಣಕ್ಕೆ ಕೊಂಡೊಯ್ಯುತ್ತಿದೆ. ಬಿಜೆಪಿ ಶಾಸಕನಿಂದ ಹಲ್ಲೆಗೊಳಪಟ್ಟ ದಲಿತ ಮಹಿಳೆ ಚಾಂದಿನಿ ನಾಯಕ್ ಅವರಿಗೆ ನ್ಯಾಯ ಸಿಗಲಿಲ್ಲ, ಶಾಸಕನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಇದು ಬಿಜೆಪಿಯ ದಲಿತ ಹಾಗೂ ಮಹಿಳಾ ವಿರೋಧಿ ನೀತಿಗೆ ಸಾಕ್ಷಿ" ಎಂದಿದೆ.