ನವದೆಹಲಿ, ಮೇ.23 (DaijiworldNews/HR): ಒಂದೇ ಮಾಸ್ಕ್ ಅನ್ನು 2 ರಿಂದ 3 ವಾರಗಳ ಕಾಲ ನಿರಂತರವಾಗಿ ಬಳಸಿದರೆ 'ಬ್ಲ್ಯಾಕ್ ಫಂಗಸ್' ಸೋಂಕು ತಗುಲುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಸಾಂಧರ್ಭಿಕ ಚಿತ್ರ
ಕೊರೊನಾ ಸೋಂಕಿನ ಅಬ್ಬರದ ನಡುವೆಯೇ ಇದೀಗ ಬ್ಲಾಕ್ ಫಂಗಸ್ ಜನರನ್ನು ಬೆಚ್ಚಿ ಬೀಳಿಸಿದ್ದು, ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೀಡು ಮಾಡಿದೆ.
ಇನ್ನು ಈ ಸಂಬಂಧ ಏಮ್ಸ್ನ ನ್ಯೂರೋ ಸರ್ಜನ್ ವೈದ್ಯ ಡಾ. ಸರತ್ ಚಂದ್ರ ಅವರು, "ಸತತ 2ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದಲೂ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ಹೆಚ್ಚಿದೆ. ಕೆಲವರು ಮಾಸ್ಕ್ ಸ್ವಚ್ಚಗೊಳಿಸದೇ ಅದನ್ನೇ ನಿರಂತರವಾಗಿ ಬಳಕೆ ಮಾಡುತ್ತಾರೆ. ಸತತವಾಗಿ ಒಂದೇ ಮಾಸ್ಕ್ ಧರಿಸುವುದರಿಂದ ಫಂಗಸ್ ಸುಲಭವಾಗಿ ಬೆಳೆಯುತ್ತದೆ. ಆದ್ದರಿಂದ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ" ಎಂದು ಹೇಳಿದ್ದಾರೆ.
ಇನ್ನು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಇಎನ್ ಟಿ ವೈದ್ಯ ಡಾ. ಸುರೇಶ್ ನಾರುಕಾ ಅವರು, "ಬ್ಲಾಕ್ ಫಂಗಸ್ಗೆ ಮೊದಲ ಕಾರಣ ಅವೈಜ್ಞಾನಿಕವಾಗಿ ವೈದ್ಯರ ಸಲಹೆ ಇಲ್ಲದೇ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳುವುದು ಹಾಗೂ ಮಾಸ್ಕ್ ಗಳನ್ನು ಸುದೀರ್ಘವಾಗಿ ಸ್ವಚ್ಥಗೊಳಿಸದೇ ಧರಿಸುವುದು. ಗಾಳಿ ಬೆಳಕು ಇಲ್ಲದೇ ಇರುವ ರೂಮ್ ಅಥವಾ ಜಾಗಗಳಲ್ಲಿ ಸುಧೀರ್ಘವಾಗಿ ಇರುವುದು ಕೂಡ ಬ್ಲಾಕ್ ಫಂಗಸ್ ಸೋಂಕಿಗೆ ಕಾರಣವಾಗುತ್ತದೆ" ಎಂದಿದ್ದಾರೆ.