ಚಿಕ್ಕಮಗಳೂರು, ಮೇ.23 (DaijiworldNews/HR): ಜಿಲ್ಲೆಯ ಮೂಡಿಗರೆ ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ (ಪಿಎಸ್ಐ) ಅರ್ಜುನ್ ಹೊಸ್ಕೇರಿ ದಲಿತ ಯುವಕನನ್ನು ಮೂತ್ರ ಸೇವಿಸುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪಿಸಲಾಗಿದ್ದು, ಆರೋಪದ ಬಗ್ಗೆ ತನಿಖೆ ನಡೆಸಿ ಪ್ರಾಥಮಿಕ ವರದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಲಾಗಿದೆ.
ಆರೋಪದ ತನಿಖೆ ನಡೆಸಿದ ನಂತರ ಉಪ ಪೊಲೀಸ್ ವರಿಷ್ಠಾಧಿಕಾರಿ ಟಿ ಟಿ ಪ್ರಭು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ವರದಿಯ ಆಧಾರದ ಮೇಲೆ, ಈ ಪಿಎಸ್ಐ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕಿರುಗುಂದ ಗ್ರಾಮದ ವಿವಾಹಿತ ಮಹಿಳೆ ಆಕೆಯ ಪತಿಯ ನಡುವಿನ ಜಗಳ ವಿಚಾರಕ್ಕೆ ಗೋಣಿಬೀಡು ಪೋಲಿಸ್ ಠಾಣೆಯ ಪಿಎಸ್ಐ ಅರ್ಜುನ್ ಯಾವುದೇ ದೂರು ಇಲ್ಲದೇ ಗ್ರಾಮದ ದಲಿತ ಯುವಕ ಪುನೀತ್ (22) ಯುವಕನನ್ನು ಶಂಕೆಯ ಮೇಲೆ ಮೇ.10 ರಂದು ಠಾಣೆಗೆ ಕರೆತಂದಿದ್ದು ಮಹಿಳೆಯೊಂದಿಗೆ ಅನೈತಿಕ ಸಂಬಂಧ ಮತ್ತು ಆಕೆಯನ್ನು ಬಚ್ಚಿಟ್ಟಿರುವುದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ.
ಇನ್ನು ಇದಕ್ಕೆ ಒಪ್ಪದಿದ್ದಾಗ ಪಿಎಸ್ಐ ಅರ್ಜುನ್ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಕುಡಿಯಲು ನೀರು ಕೇಳಿದ್ದಕ್ಕೆ ಮೂತ್ರವನ್ನು ಕುಡಿಸಿದ್ದಾರೆ ಎಂದು ಯುವಕ ಆರೋಪಿಸಿದ್ದು, ನೊಂದ ಯುವಕ ಎಸ್.ಪಿ, ಐಜಿ, ಡಿಐಜಿಗೆ ಪತ್ರ ಬರೆದು ತನಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾನೆ. ಯುವಕನ ದೂರಿನ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿವೈಎಸ್ ಪಿ ಒಬ್ಬರನ್ನು ನೇಮಿಸಿದ್ದರು.
ಪಿಎಸ್ಐ ಅರ್ಜುನ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ ಸಂಖ್ಯೆ 342, 323, 504, 506 ಮೀ 330 ಮತ್ತು 348 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.