ಬೆಳಗಾವಿ, ಮೇ.23 (DaijiworldNews/PY): "ವಿಪಕ್ಷಗಳ ಒತ್ತಾಯಕ್ಕೆ ಮಣಿದು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆಯೇ ಹೊರತು ಸಂಕಷ್ಟದಲ್ಲಿದ್ದ ಜನರಿಗೆ ನೆರವಾಗುವ ಮನೋಭಾವ ಸರ್ಕಾರಕ್ಕಿಲ್ಲ" ಎಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಸರ್ಕಾರದ ವಿರುದ್ದ ದೂರಿದ್ದಾರೆ.
"ಪ್ರಸ್ತುತ ಜಾರಿಯಲ್ಲಿರುವ ಕಠಿಣ ಸಂದರ್ಭವನ್ನು ನಿಭಾಯಿಸಲು ಜನರಿಗೆ ನೆರವಾಗುವ ಅಗತ್ಯವಾದ ಕಲ್ಯಾಣ ಕ್ರಮಗಳ ಬಗ್ಗೆ ವಿವರಣೆ ನೀಡದೇ, ಯಾವುದೇ ಉದ್ದೇಶವಿಲ್ಲದೇ ಸರ್ಕಾರ 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ" ಎಂದು ಕಿಡಿಕಾರಿದ್ದಾರೆ.
"ಸಂಕಷ್ಟದಲ್ಲಿರುವ ಜನರಿಗೆ ತಮಿಳುನಾಡು ಸರ್ಕಾರ 4,000 ರೂ.ಗಳ ಆರ್ಥಿಕ ನೆರವು ಘೋಷಣೆ ಮಾಡಿದರೆ, ಸರ್ಕಾರಿ ಹಾಗೂ ಖಾಸಗಿ ಕೊರೊನಾ ರೋಗಿಗಳ ಉಚಿತ ಚಿಕಿತ್ಸೆ ನೀಡಲು ಆಂಧ್ರಪ್ರದೇಶ ಸರ್ಕಾರ ತೀರ್ಮಾನಿಸಿದೆ. ರಾಜ್ಯ ಸರ್ಕಾರ ಈ ರೀತಿಯಾದ ಯಾವುದೇ ಕಾರ್ಯವನ್ನು ಮಾಡಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.