ನವದೆಹಲಿ, ಮೇ.23 (DaijiworldNews/HR): ಕೊರೊನಾ ನಿಯಂತ್ರಣಕ್ಕೆ ದೇಶದ ಅನೇಕ ಕಡೆಗಳಲ್ಲಿ ಲಾಕ್ಡೌನ್ ಜಾರಿಯಲಿದ್ದು, ಸುಮ್ಮನೆ ಹೊರಗೆ ತಿರುಗಿದರೆ ಪೊಲೀಸರು ಪ್ರಶ್ನಿಸುವುದು, ವಾಹನಗಳನ್ನು ಜಪ್ತಿ ಮಾಡುವುದು ನ್ಡೆಯುತ್ತಿದೆ. ಆದರೆ ಛತ್ತೀಸ್ಗಢದಲ್ಲಿ ಐಎಎಸ್ ಅಧಿಕಾರಿಯೊಬ್ಬರು ದಾರಿಹೋಕನೊಬ್ಬನ ಕಪಾಳಕ್ಕೆ ಹೊಡೆದು, ಮೊಬೈಲ್ ಬಿಸಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಕೊರೊನಾ ನಿಯಮಗಳನ್ನು ಉಲ್ಲಂಘಿಸಿದರೆಂದು ಕುಪಿತರಾದ ಸೂರಜ್ಪುರ್ನ ಜಿಲ್ಲಾಧಿಕಾರಿ, ವ್ಯಕ್ತಿಯೊಬ್ಬನ ಕಪಾಳಕ್ಕೆ ಹೊಡೆದು, ಆತನ ಮೊಬೈಲ್ನ್ನು ನೆಲಕ್ಕೆ ಜೋರಾಗಿ ಎಸೆದಿರುವುದನ್ನು ವೈರಲ್ ಆಗಿರುವುದನ್ನು ವಿಡಿಯೊದಲ್ಲಿ ನೋಡಬಹುದು.
ದೈಹಿಕ ಹಲ್ಲೆ ನಡೆಸಿರುವುದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಕ್ಷಮೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ವೈರಲ್ ಆಗಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬನಿಗೆ ನಾನು ಹೊಡೆದಿರುವುದು ದಾಖಲಾಗಿದೆ. ಇವತ್ತಿನ ನನ್ನ ನಡೆತೆಗೆ ಪ್ರಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ವಿಡಿಯೊದಲ್ಲಿ ಕಾಣುವ ವ್ಯಕ್ತಿಗೆ ಅಗೌರವ ಕೊಡುವ ಅಥವಾ ಕೀಳಾಗಿ ಕಾಣುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
23 ವರ್ಷ ಯುವಕನು ಬೈಕ್ನಲ್ಲಿ ಅತಿ ವೇಗವಾಗಿ ಸಾಗುತ್ತಿದ್ದು, ಆತ ಅಧಿಕಾರಿಗಳೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದ್ದು, ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ಕೊರೊನಾ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.