ಬೆಂಗಳೂರು, ಮೇ.23 (DaijiworldNews/PY): ಕೊರೊನಾ ಲಸಿಕೆ ಕೊರತೆ ಇರುವ ಹಿನ್ನೆಲೆ ರಾಜ್ಯದಲ್ಲಿ ಸದ್ಯಕ್ಕೆ 18-44 ವರ್ಷದವರಿಗೆ ಲಸಿಕೆ ವಿತರಿಸದಿರಲು ಸರ್ಕಾರ ತೀರ್ಮಾನಿಸಿದೆ.
ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಪ್ರಕರಣೆ ಹೊರಡಿಸಿದ್ದು, "18-44 ವರ್ಷದವರಿಗೆ ಸದ್ಯಕ್ಕೆ ಕೊರೊನಾ ಲಸಿಕೆ ಲಭ್ಯವಿಲ್ಲ. ಆದರೆ, ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ, ದುರ್ಬಲ ಹಾಗೂ ಆದ್ಯತೆ ಗುಂಪಿನವರಿಗೆ ನಿಯೋಜಿತ ನೋಡಲ್ ಅಧಿಕಾರಿಗಳು ಲಸಿಕೆ ಪಡೆಯುವ ದಿನಾಂಕ ಹಾಗೂ ಸಮಯದ ಕುರಿತು ಮಾಹಿತಿ ನೀಡಲಿದ್ದಾರೆ" ಎಂದಿದ್ದಾರೆ.
18-44 ವರ್ಷದ ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಶನಿವಾರ ಲಸಿಕೆ ವಿತರಣೆ ಮಾಡಲು ಜಿಲ್ಲಧಿಕಾರಿಗಳು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಎರಡು ದಿನಗಳ ಹಿಂದೆಯಷ್ಟೇ ಸೂಚಿಸಲಾಗಿತ್ತು. ಈ ವಿಚಾರವಾಗಿ ಆಸ್ಪತ್ರೆಗಳಿಗೆ ಸರಿಯಾದ ನಿರ್ದೇಶನ ನೀಡದೇ ಇದ್ದ ಕಾರಣ 45 ವರ್ಷದೊಳಗಿ ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ವಿತರಣೆಯಾಗಲಿಲ್ಲ.
"45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ನ ಮೊದಲ ಡೋಸ್ ನೀಡಲಾಗಿವುದು. ನಗರ ಪ್ರದೇಶಗಳಲ್ಲಿ ಆನ್ಲೈನ್ ಮೂಲಕ ಅರ್ಹ ಫಲಾನುಭವಿಗಳು ನೋಂದಾವಣೆ ಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಾದರೆ ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದಾಗಿದೆ. ಎರಡನೇ ಲಸಿಕೆ ಪಡೆಯುವವರು ನೇರವಾಗಿ ಸಮೀಪದ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಬಹುದು" ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಸದ್ಯಕ್ಕೆ ಕೋವ್ಯಾಕ್ಸಿನ್ನ ಮೊದಲ ಡೋಸ್ ಲಭ್ಯವಿಲ್ಲ. ಎರಡನೇ ಡೋಸ್ ಪಡೆಯಬೇಕಾದವರ ಮೊಬೈಲ್ಗೆ ದೂರವಾಣಿ ಸಂದೇಶ ಕಳುಹಿಸಲಾಗುವುದು. ಅಂತವರು ಲಸಿಕಾ ಕೇಂದ್ರಗಳಿಗೆ ನಿಗದಿತ ಸಮಯಕ್ಕೆ ತೆರಳಿ, ಲಸಿಕೆ ಹಾಕಿಸಿಕೊಳ್ಳಬಹುದು" ಎಂದಿದ್ದಾರೆ.