ವಿಜಯಪುರ, ಮೇ.22 (DaijiworldNews/HR): ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತಿರುವ ಕಾರಣ ಸೋಂಕಿತರಿಗೆ ತ್ವರಿತ ಚಿಕಿತ್ಸೆ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಮನೆಗಳಲ್ಲಿ ಗ್ರಾಮಸ್ಥರು ವಾಸಿಸುತ್ತಿದ್ದು, ಅಂತಹ ಕುಟುಂಬದ ಸದಸ್ಯರಲ್ಲಿ ಕೊರೊನಾ ವೇಗವಾಗಿ ಹರಡಲು ಕಾರಣವಾಗುತ್ತಿದೆ. ಹೀಗಾಗಿ ಕೊರೊನಾ ಲಕ್ಷಣಗಳು ಕಂಡುಬಂದ ತಕ್ಷಣ ಗ್ರಾಮೀಣ ಪರಿಸರದ ಸೋಂಕಿತರಿಗೆ ನಿಗದಿತ ಔಷಧಿ ನೀಡುವ ಜೊತೆಗೆ ಸ್ವೀಕರಿಸಲು ಮನವರಿಕೆ ಮಾಡಬೇಕು" ಎಂದು ಸೂಚಿಸಿದರು.
"ಪಾಸಿಟಿವ್ ಪ್ರಕರಣ ಕಂಡು ಬಂದ ತಕ್ಷಣ ಸೋಂಕಿತರನ್ನು ಕೊರೊನ ಕೇರ್ ಸೆಂಟರ್, ನಿಗದಿತ ಆಸ್ಪತ್ರೆ, ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಬೇಕು" ಎಂದು ನಿರ್ದೇಶನ ನೀಡಿದರು.
ಇನ್ನು ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದವರನ್ನು ತಕ್ಷಣ ನಿಗದಿತ ಆಸ್ಪತ್ರೆಗೆ ಸ್ಥಳಾಂತರಿಸಿ, ಚಿಕಿತ್ಸೆಗೆ ಒಳಪಡಿಸಬೇಕು. ಜಿಲ್ಲಾ ಆಸ್ಪತ್ರೆ ಮೇಲಿನ ಒತ್ತಡ ಕಡಿತಗೊಳಿಸಲು ಆಯಾ ತಾಲೂಕು ಆರೋಗ್ಯ ಕೇಂದ್ರ ,ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಮತ್ತು ಇತರೆ ಸೌಲಭ್ಯವಿರುವಂತೆ ನೋಡಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.