ನವದೆಹಲಿ, ಮೇ.22 (DaijiworldNews/PY): "ಹಲವು ರಾಜ್ಯಗಳಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ರೋಗಿಗಳ ಆಧಾರದ ಮೇಲೆ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 23,680 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧ ಹಂಚಿಕೆ ಮಾಡಲಾಗಿದೆ" ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ದೇಶದಲ್ಲಿ ಆಂಫೊಟೆರಿಸಿನ್-ಬಿ ಔಷಧ ಲಭ್ಯತೆಯ ಕುರಿತು ಶನಿವಾರ ಸಮಗ್ರ ತನಿಖೆ ನಡೆಸಿದ ಅವರು, "ದೇಶದಾದ್ಯಂತ 8,848 ಬ್ಲ್ಯಾಕ್ ಫಂಗಸ್ ರೋಗಿಗಳಿದ್ದು, ರಾಜ್ಯಗಳಿಗೆ ರೋಗಿಗಳ ಆಧಾರದ ಮೇಲೆ ಔಷಧಿಯನ್ನು ಪೂರೈಸಲಾಗಿದೆ" ಎಂದಿದ್ದಾರೆ.
"ಕರ್ನಾಟಕದಲ್ಲಿ 500, ಆಂಧ್ರ ಪ್ರದೇಶ 910, ಮಹಾರಾಷ್ಟ್ರ 2000, ತೆಲಂಗಾಣದಲ್ಲಿ 350, ಗುಜರಾತ್ 2281, ರಾಜಸ್ಥಾನ 700, ಹರಿಯಾಣ 250 ಹಾಗೂ ಮಧ್ಯಪ್ರದೇಶದಲ್ಲಿ 720 ಪ್ರಕರಣಗಳು ದಾಖಲಾಗಿವೆ" ಎಂದು ಮಾಹಿತಿ ನೀಡಿದ್ದಾರೆ.
"ಕರ್ನಾಟಕದಲ್ಲಿ 500 ಬ್ಲ್ಯಾಕ್ ಫಂಗಸ್ ಪ್ರಕರಣಗಳಿರುವ ಹಿನ್ನೆಲೆ 1,270 ಹೆಚ್ಚುವರಿ ಔಷಧ ಹಂಚಿಕೆ ಮಾಡಲಾಗಿದೆ. ರಾಜ್ಯಕ್ಕೆ ಎರಡು ವಾಋಗಳ ಹಿಂದೆ ಸುಮಾರು 1,660 ವಯಲ್ಗಳನ್ನು ಹಂಚಿಕೆ ಮಾಡಲಾಗಿತ್ತು" ಎಂದಿದ್ದಾರೆ.