ಶಿವಮೊಗ್ಗ, ಮೇ.22 (DaijiworldNews/PY): "ನಮ್ಮ ದೇಶವನ್ನು ಹಾಳುಗೆಡವಲು ಚೀನಾ ದೇಶ ಹೆಜ್ಜೆ ಇಟ್ಟಿತ್ತು. ಲಸಿಕೆ ಮೂಲಕ ಅದಕ್ಕೆ ನಮ್ಮ ದೇಶ ತಕ್ಕ ಉತ್ತರ ನೀಡಿದ್ದು, ಅದರಲ್ಲಿ ಸಫಲವಾಗಿದೆ. ಆದರೆ, ಕಾಂಗ್ರೆಸ್ ಕೊರೊನಾ ಮುಂದುವರಿಸಲು ಸತತ ಪ್ರಯತ್ನ ಮಾಡುತ್ತಿದೆ" ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ದೂರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ಡಿಸಿ, ಸಿಇಒ ಜೊತೆ ಸಭೆ ನಡೆಸಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ ನಾನು ವಿಪಕ್ಷ ನಾಯಕ. ಆ ಸಂದರ್ಭ ರಾಜ್ಯದಲ್ಲಿ ಬರಗಾಲದ ಸನ್ನಿವೇಶ ನಿರ್ಮಾಣವಾಗಿತ್ತು. ಆಗ ಸರ್ಕಾರದಿಂದ ಆದೇಶ ಇದೆ ನಿಮಗೆ ಸಭೆ ನಡೆಸುವ ಅಧಿಕಾಎ ಇಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರು. ಕೂಡಲೇ ನಾನು ಸಿಎಂ ಅವರಿಗೆ ಪತ್ರ ಬರೆದೆ. ವಿಪಕ್ಷ ನಾಯಕರಿಗೆ ಸಭೆ ನಡೆಸಲು ಅವಕಾಶ ನೀಡುತ್ತಿಲ್ಲ, ಇದು ಯಾವ ನ್ಯಾಯ ಎಂದು ಪ್ರಶ್ನಿಸಿದೆ. ನಿಮ್ಮ ಸರ್ಕರ ಇದ್ದಾಗ ಒಂದು ನ್ಯಾಯ, ಬಿಜೆಪಿ ಸರ್ಕಾರ ಇದ್ದಾಗ ಒಂದು ನ್ಯಾಯವೇ?. ಸಂವಿಧಾನ ಎಲ್ಲರಿಗೂ ಒಂದೇ" ಎಂದು ಕಿಡಿಕಾರಿದ್ದಾರೆ.
"ಮುಸ್ಲಿಂಮರು ಕೊರೊನಾ ಲಸಿಕೆ ಪಡೆದುಕೊಳ್ಳಬೇಡಿ, ಮಕ್ಕಳಾಗದಿರಲು ಇದೊಂದು ಷಡ್ಯಂತ್ರ ಎಂದು ಯು.ಟಿ ಖಾದರ್ ಹೇಳುತ್ತಾರೆ. ಲಸಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಕೂಡಾ ಕೀಳುಮಟ್ಟದ ರಾಜಕಾರಣ ಮಾಡುತ್ತಾರೆ. ಇವರಿಗೆ ಲಸಿಕೆ ಕುರಿತು ಅನುಮಾನ, ನಂಬಿಕೆ ಇಲ್ಲ" ಎಂದಿದ್ದಾರೆ.
"ಸರ್ಕಾರದಿಂದ ಲಸಿಕೆ ನೀಡಲು ಅಗುತ್ತಿಲ್ಲ, ಈ ಸರ್ಕಾರ ಸತ್ತು ಹೋಗಿದೆ ಎಂದು ಹೇಳುತ್ತಾರೆ. ಮಧ್ಯಪ್ರದೇಶ ಸೇರಿದಂತೆ ಪಂಜಾಬ್, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಆ ರಾಜ್ಯಗಳಲ್ಲಿ ಶೇ.100ರಷ್ಟು ಲಸಿಕೆ ನೀಡಿದ್ದೀರಾ?. ಈ ರೀತಿಯಾದ ರಾಜಕೀಯ ಏಕೆ?" ಎಂದು ಕೇಳಿದ್ದಾರೆ.