ವಿಜಯವಾಡ, ಮೇ.22 (DaijiworldNews/PY): ಕೊರೊನಾ ಸೋಂಕು ತಗುಲಿದ್ದ ದಂಪತಿಗಳಿಬ್ಬರು ಪುಟ್ಟ ಮಕ್ಕಳಿಗೂ ಕೂಡಾ ಸೋಂಕು ಹರಬಹುದು ಎಂಬ ಭೀತಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪೆಡಾನಾದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ಜಕ್ಕುಲಾ ಲೀಲಾ ಪ್ರಸಾದ್ (40) ಹಾಗೂ ಭಾರತಿ (37) ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ ಕುಟುಂಬದ ಸದಸ್ಯರು ನೋಡಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.
"ಕಳೆದ 10 ದಿನಗಳಿಂದ ಲೀಲಾ ಪ್ರಸಾದ್ ಹಾಗೂ ಭಾರತಿ ದಂಪತಿಗಳಿಗೆ ಕೊರೊನಾ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಕೊರೊನಾ ಪರೀಕ್ಷೆ ಮಾಡಿಸಿದ ವೇಳೆ ಪಾಸಿಟಿವ್ ವರದಿಯಾಗಿತ್ತು. ಈ ಹಿನ್ನೆಲೆ ಅವರು ಕ್ವಾರಂಟೈನ್ ಆಗಿದ್ದರು" ಎಂದು ಪೆಡಾನಾ ಪೊಲೀಸರು ತಿಳಿಸಿದ್ದಾರೆ.
"ಈ ದಂಪತಿಗಳಿಗೆ 9 ವರ್ಷದ ಹಾಗೂ 5 ವರ್ಷದ ಹೆಣ್ಣು ಮಕ್ಕಳಿದ್ದಾರೆ. ಮಕ್ಕಳಿಗೆ ಸೋಂಕು ಹರಡಬಹುದು ಎನ್ನುವ ಭೀತಿಯಿಂದ ದಂಪತಿಗಳು ಖಿನ್ನತೆಗೆ ಒಳಗಾಗಿದ್ದರು. ಈ ಕಾರಣದಿಂದ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಪೊಲೀಸರು ಸಿಆರ್ಪಿಸಿ ಸೆಕ್ಷನ್ 174 ರ ಅಡಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.