ನವದೆಹಲಿ, ಮೇ.22 (DaijiworldNews/HR): ಡಿಎಲ್ಎಫ್ ಲಂಚ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎಂದು ತಿಳಿದು ಬಂದಿದೆ.
ಮೂರು ವರ್ಷಗಳಿಗಿಂತ ಅಧಿಕ ಸಮಯ ಜೈಲಿನಲ್ಲಿದ್ದ ಲಾಲೂ ಪ್ರಸಾದ್ ಅವರು ಎಪ್ರಿಲ್ನಿಂದ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಡಿಎಲ್ಎಫ್ ಸಮೂಹ, ದಕ್ಷಿಣ ದೆಹಲಿಯ ಸ್ಥಳವೊಂದರಲ್ಲಿ ಆಸ್ತಿಯೊಂದನ್ನು ಲಂಚವಾಗಿ ನೀಡಿತ್ತು ಎಂದು ಆರೋಪಿಸಲಾಗಿತ್ತು.
ಶೆಲ್ ಕಂಪನಿ ಎಂದು ಹೇಳಲಾದ ಎಬಿ ಎಕ್ಸ್ ಪೋರ್ಟ್ಸ್ 2007ರ ಡಿಸೆಂಬರ್ನಲ್ಲಿ ರಾಜಧಾನಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಸುಮಾರು 5 ಕೋಟಿಗೆ ಆಸ್ತಿಯನ್ನು ಖರೀದಿಸಿತ್ತು ಮತ್ತು ಆ ಸಮಯದಲ್ಲಿ ಅದರ ನಿಜವಾದ ವೃತ್ತ ದರವು 30 ಕೋಟಿ ಎಂದು ಆರೋಪಿಸಲಾಗಿದೆ.
ಇನ್ನು 2011 ರಲ್ಲಿ ಲಾಲು ಯಾದವ್ ಅವರ ಮಗ ತೇಜಶ್ವಿ ಯಾದವ್ ಮತ್ತು ಅವರ ಪುತ್ರಿಯರಾದ ಚಂದಾ ಯಾದವ್ ಮತ್ತು ರಾಗಿಣಿ ಲಾಲು ಅವರು ಷೇರುಗಳ ವರ್ಗಾವಣೆಯ ಮೂಲಕ ಕೇವಲ 4 ಲಕ್ಷಕ್ಕೆ ಎಬಿ ಎಕ್ಸ್ ಪೋರ್ಟ್ಸ್ ಅನ್ನು ಖರೀದಿಸಿದರು ಎಂದು ಆರೋಪಿಸಲಾಗಿತ್ತು.