ಬೆಂಗಳೂರು, ಮೇ.22 (DaijiworldNews/PY): "ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಅನಾಥ ಶವಗಳ ಅಸ್ಥಿ ಸರ್ಕಾರದ ಬಳಿ ಇದ್ದು, ಅವುಗಳನ್ನು ಸರ್ಕಾರವೇ ವಿಸರ್ಜಿಸಲು ನಿರ್ಧರಿಸಿದೆ" ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ 1 ಸಾವಿರ ಅನಾಥ ಶವಗಳ ಅಸ್ಥಿ ಸರ್ಕಾರದ ಬಳಿ ಇದೆ. ಅನಿವಾರ್ಯ ಅಥವಾ ಕಷ್ಟದ ಕಾರಣದಿಂದಲೋ ಕುಟುಂಬದವರು ಅಸ್ಥಿ ಸ್ವೀಕರಿಸಲು ಬರುತ್ತಿಲ್ಲ. ಮೃತರ ಸಂಬಂಧಿಕರನ್ನು ನಾವು ಸಂಪರರ್ಕಿಸಿದ್ದು, ಆದರೆ, ಅವರ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ. ಅಸ್ಥಿ ತೆಗೆದುಕೊಳ್ಳಲು ನಾವು ಅವರಿಗೆ ಮನವಿ ಮಾಡಿದ್ದೇವೆ" ಎಂದಿದ್ದಾರೆ.
"ಯಾವುದೇ ಬೇಧ-ಭಾವ ಮಾಡದೇ ಅಸ್ಥಿಗಳನ್ನು ವಿಸರ್ಜಿಸಲು ವ್ಯವಸ್ಥೆ ಮಾಡಿದ್ದೇವೆ. ಸಂಪ್ರದಾಯಬದ್ದವಾಗಿ ಕಂದಾಯ ಇಲಾಖೆಯ ವತಿಯಿಂದ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲಿದ್ದೇವೆ" ಎಂದು ಹೇಳಿದ್ದಾರೆ.
ಆಕ್ಸಿಜನ್ ಕಾನ್ಸಂಟ್ರೇಟರ್ ಕೊರತೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ರಾಜ್ಯದಲ್ಲಿ ಸದ್ಯ ಕಾನ್ಸಂಟ್ರೇಟರ್ ಕೊರತೆ ಇಲ್ಲ. ಇದಕ್ಕಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳ ಸಹಯೋಗದೊಂದಿಗೆ ವ್ಯವಸ್ಥೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.