ಬೆಂಗಳೂರು, ಮೇ 22 (DaijiworldNews/MS): ಕೊರೊನಾ ಸೋಂಕು ಪರೀಕ್ಷೆ ಕಡಿಮೆ ಮಾಡಿಸಿ ಫೇಕುಗಿರಿಯಿಂದ ಸೋಂಕು ಇಳಿಮುಖ ಎನ್ನುತ್ತಾ ಸರ್ಕಾರ ಜನರಿಗೆ ಸುಳ್ಳು ಭರವಸೆ ನೀಡುತ್ತಿದೆ ಎಂದು ವಿಪಕ್ಷ ಮುಖಂಡ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿ, ಸರ್ಕಾರವನ್ನು ತರಾಟೆಗೆತ್ತಿಕೊಂಡ ಅವರು, " ಕೊರೊನಾ ಪರೀಕ್ಷೆ ಕಡಿಮೆಮಾಡಿ, ಸೋಂಕು ಇಳಿಮುಖವಾಗುತ್ತಿದೆ ಎಂಬ ಸುಳ್ಳು ಭರವಸೆಯನ್ನು ಜನರಲ್ಲಿ ಬಿತ್ತುವ ಬಿಜೆಪಿ ಸರ್ಕಾರದ ನಿರ್ಧಾರ ಕೊಲೆಗಡುಕತನದ್ದು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಸುತ್ತೋಲೆ ಎಂದು ಮತ್ತೊಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅದರಲ್ಲಿ " ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಸುಳ್ಳುಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರ ಈ ಸುತ್ತೋಲೆ ಸಾಕ್ಷಿ.ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎಂಬ ಸಿಎಂ ಅವರ ಸುಳ್ಳು ಪ್ರಚಾರಕ್ಕೆ ಕಾರಣ, ರೋಗ ಲಕ್ಷಣಗಳಿಲ್ಲದವರ ( ಅಸಿಂಪ್ಟಾಮ್ಯಾಟಿಕ್ಸ್) ಸೋಂಕು ಪರೀಕ್ಷೆ ಮಾಡಲೇ ಬಾರದು ಎನ್ನುವ ರಾಜ್ಯ ಸರ್ಕಾರದ ಸುತ್ತೋಲೆ ಕಾರಣ" ಎಂದುಆರೋಪಿಸಿದ್ದಾರೆ.
ಇದರಿಂದಾಗುವ ಅಪಾಯ ಗೊತ್ತೇ ಮುಖ್ಯಮಂತ್ರಿಗಳೇ? ರೋಗ ಲಕ್ಷಣಗಳಿಲ್ಲ ಎನ್ನುವ ಕಾರಣಕ್ಕೆ ಪರೀಕ್ಷೆ ಮಾಡದಿರುವ ಒಬ್ಬ ಸೋಂಕಿತ ವ್ಯಕ್ತಿ ತನ್ನ ಸಂಪರ್ಕಕ್ಕೆ ಬರುವ ನಾಲ್ಕಾರು ಮಂದಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ.ಲಾಕ್ ಡೌನ್ ಹೊರತಾಗಿಯೂ ಕೊರೊನಾ ನಿಯಂತ್ರಣಕ್ಕೆ ಬರದೆ ಇರಲು ಬಿಜೆಪಿ ಸರ್ಕಾರದ ಈ ಮೂರ್ಖ ನಿರ್ಧಾರ ಕಾರಣ. ಮೇ ಮೊದಲ ವಾರದಲ್ಲಿ 49,000ದಷ್ಟಿದ್ದಕೊರೊನಾ ಸೋಂಕಿತರ ಸಂಖ್ಯೆ, ಲಾಕ್ಡೌನ್ ಹೇರಿದ ಕೆಲವೇ ದಿನಗಳಲ್ಲಿ 38,000ಕ್ಕೆ ಇಳಿಯಿತು ಎಂದು ಮುಖ್ಯಮಂತ್ರಿಗಳು ಕೊಚ್ಚಿಕೊಂಡರು. ಆದರೆ, ಏಪ್ರಿಲ್ ಒಂದರಂದು ನಡೆದಿದ್ದ 1,77,560 ಕೊರೊನಾ ಪರೀಕ್ಷೆ, ಮೇ 17ಕ್ಕೆ 97000ಕ್ಕೆ ಕುಸಿದಿರುವುದನ್ನು ಮಾತ್ರ ಅವರು ಹೇಳಿಲ್ಲ ಎಂದು ಅಪಾದಿಸಿದ್ದಾರೆ.
ಸುಳ್ಳು ಲೆಕ್ಕದಿಂದ ಜನರ ದಾರಿತಪ್ಪಿಸುವ ಕೀಳುಬುದ್ದಿಯನ್ನು ಬಿಟ್ಟು, ತಕ್ಷಣ ರಾಜ್ಯ ಸರ್ಕಾರವೂ ರೋಗಲಕ್ಷಣಗಳಿಲ್ಲದವರ ಕೊರೊನಾ ಪರೀಕ್ಷೆ ಮಾಡುವ ಅಭಿಯಾನವನ್ನು ಪುನರಾರಂಭಿಸಬೇಕೆಂದು ಒತ್ತಾಯಿಸುತ್ತೇನೆ. ಕೊರೊನಾವನ್ನು ಔಷದಿ-ಚಿಕಿತ್ಸೆಯ ಮೂಲಕ ಎದುರಿಸಬೇಕೇ ಹೊರತು ಸುಳ್ಳು-ಮೋಸಗಳ ಫೇಕುಗಿರಿಯಿಂದ ಅಲ್ಲ ಎಂದು ಹೇಳಿದ್ದಾರೆ.