ನವದೆಹಲಿ, ಮೇ.22 (DaijiworldNews/PY): "ಭಾರತದಿಂದ ಬೇರೆ ದೇಶಗಳಿಗೆ ಪ್ರಯಾಣಿಸುವವರು ಇಂದಿನಿಂದ ತಮ್ಮ ಜೊತೆ ಕ್ಯೂಆರ್ ಕೋಡ್ ಹೊಂದಿರುವ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಾಗಿ ತರಬೇಕು" ಎಂದು ನಾಗರೀಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಕಳೆದ ವಾರ ಈ ಬಗ್ಗೆ ಮಾಹಿತಿ ನೀಡಿದ್ದ ನಾಗರೀಕ ವಿಮಾನಯಾನ ಸಚಿವಾಲಯ, "ಕ್ಯೂಆರ್ಕೋಡ್ ಹೊಂದಿರುವ ಆರ್ಟಿಪಿಸಿಆರ್ ನೆಗೆಟಿವ್ ಹೊಂದಿರುವವರಿಗೆ ಮಾತ್ರವೇ ಅಂತರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ಕಲ್ಪಿಸುವಂತೆ ವಿಮಾನ ಸಂಸ್ಥೆಗಳಿಗೆ ಸೂಚಿಸಲಾಗಿತ್ತು. ಇದು ಮೇ.22ರಿಂದ ಭಾರತದಿಂದ ಹೊರಡುವ ಎಲ್ಲಾ ವಿಮಾನಗಳಿಗೆ ಅನ್ವಯವಾಗಲಿದೆ" ಎಂದು ಹೇಳಿತ್ತು.
"ಪ್ರಯಾಣದ ಸಂದರ್ಭ ಹಲವಾರು ಮಂದಿ ನಕಲಿ ಕೊರೊನಾ ಪರೀಕ್ಷಾ ವರದಿ ನೀಡುತ್ತಿರುವ ವಿಚಾರ ತಿಳಿದುಬಂದಿದ್ದು, ಈ ಕುರಿತು ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರ ಮೂಲ ವರದಿಗೆ ಕ್ಯೂಆರ್ ಕೋಡ್ ಲಿಂಕ್ ಆಗಿದ್ದು, ಇದರಿಂದ ನಿಖರತೆ ತಿಳಿಯುತ್ತದೆ" ಎಂದು ಹೇಳಿದೆ.
ಕಳೆದ ವರ್ಷ ಮಾರ್ಚ್ 23ರಿಂದ ಕೊರೊನಾ ಸೋಂಕು ಹಿನ್ನೆಲೆ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಕೆಲ ಆಯ್ದ ದೇಶಗಳಿಗೆ ಮಾತ್ರವೇ ವಂದೇ ಭಾರತ್ ಮಿಷನ್ ಅಡಿ ವಿಶೇಷ ಅಂತರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸುತ್ತಿದ್ದವು.