ಬೆಂಗಳೂರು, ಮೇ.22 (DaijiworldNews/HR): ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕೊರೊನಾ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯೊಂದಿಗಿನ ಸಂವಾದದ ವೇಳೆ ಪ್ರಧಾನಿ ಮೋದಿ ಭಾವುಕರಾದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಸಮಿತಿ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸಮಿತಿ, "ಕಣ್ಣೀರು ಹೇಡಿಯ ಪ್ರಮುಖ ಅಸ್ತ್ರ. ಎದುರಿಗಿದ್ದ ಕ್ಯಾಮೆರಾ ಹಾಗೂ ಟೆಲಿಪ್ರಾಂಪ್ಟರ್ ನೋಡಿಕೊಂಡು ಕಣ್ಣೀರು ಸುರಿಸುವುದು ಅದ್ಬುತ ನಟನಾ ಕೌಶಲ್ಯ ಪ್ರಧಾನಿ ಮೋದಿಯವರೇ, ಜನತೆಗೆ ಬೇಕಿರುವುದು ನಿಮ್ಮ ಕಣ್ಣೀರಲ್ಲ" ಎಂದಿದೆ.
ಇನ್ನು "ನರೇಂದ್ರ ಮೋದಿ ಅವರೇ, ಜನತೆಗೆ ಬೇಕಿರುವುದು ನಿಮ್ಮ ಕಣ್ಣೀರಲ್ಲ ಆಕ್ಸಿಜನ್, ಲಸಿಕೆ, ವೈದ್ಯಕೀಯ ವ್ಯವಸ್ಥೆ, ಚಿಕಿತ್ಸೆ, ಆರ್ಥಿಕ ನೆರವು. ಇದ್ಯಾವುದನ್ನೂ ನೀಡದೆ ಎರಡು ಹನಿ ಕಣ್ಣೀರ ನಾಟಕದಿಂದ ಜನಾಕ್ರೋಶ ತಣಿಸುವ ತಂತ್ರ ಬಿಡಿ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
"ಸದಾ ಜನತೆಯ ದಿಕ್ಕುತಪ್ಪಿಸುತ್ತಲೇ ಬಂದಿರುವ ಬಿಜೆಪಿ ತನ್ನ ಫೂಲ್ ಕಿಟ್ ಮೂಲಕ ಕಾಂಗ್ರೆಸ್ ಮೋದಿ ಹೆಸರು ಕೆಡಿಸಲು ಯತ್ನಿಸಿತ್ತು ಎಂದು ಸುಳ್ಳು ಬಿತ್ತರಿಸಿತ್ತು. ಈಗಾಗಲೇ ಕೆಟ್ಟಿರುವ ಸ್ವಯಂಘೋಷಿತ ನಕಲಿ ವಿಶ್ವನಾಯಕನ ಹೆಸರು ಕೆಡಿಸಲು ಅವಕಾಶವೆಲ್ಲಿದೆ!! ಬಿಜೆಪಿಗೆ ಜನರ ಪ್ರಾಣದ ಚಿಂತೆಗಿಂತ, ಕೆಡುತ್ತಿರುವ ಹೆಸರಿನ ಬಗ್ಗೆಯೇ ಚಿಂತೆಯಾಗಿದೆ!" ಎಂದು ಹೇಳಿದೆ.