ನವದೆಹಲಿ, ಮೇ.22 (DaijiworldNews/PY): ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಭಾರತ ರೂಪಾಂತರ ಎಂದು ಉಲ್ಲೇಖಿಸಿದ ವರದಿ, ವಿಷಯಗಳನ್ನು ಸಾಮಾಜಿಕ ಜಾಲತಾಣಗಳಿಂದ ತಕ್ಷಣವೇ ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣಗಳಿಗೆ ಮಾಹಿತ ತಂತ್ರಜ್ಞಾನ ಸಚಿವಾಲಯ ಮನವಿ ಮಾಡಿದೆ.
"ವಿಶ್ವ ಆರೋಗ್ಯ ಸಂಸ್ಥೆ ತನ್ನ ಯಾವುದೇ ವರದಿಗಳಲ್ಲಿ ಬಿ.1.617 ರೂಪಾಂತರಿ ಕೊರೊನಾವನ್ನು ಭಾರತದ ರೂಪಾಂತರಿ ಎಂದು ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಗಳು ಪ್ರಸಾರವಾಗುತ್ತಿವೆ" ಎಂದು ತಿಳಿಸಿದೆ.
ಈ ಬಗ್ಗೆ ಶುಕ್ರವಾರ ಸಾಮಾಜಿಕ ಜಾಲತಾಣಗಳಿಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಪತ್ರ ಬರೆದಿದ್ದು, "ಕೊರೊನಾ ಭಾರತದ ರೂಪಾಂತರ ಎನ್ನುವ ಪದವಿರುವ ಎಲ್ಲಾ ವರದಿಗಳನ್ನು ತೆಗೆದುಹಾಕಬೇಕು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಇದು ಸುಳ್ಳು. ಯಾವುದೇ ನಿರ್ದಿಷ್ಟವಾದ ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆ ವೈಜ್ಞಾನಿಕವಾಗಿ ಹೆಸರಿಸಿಲ್ಲ" ಎಂದಿದೆ.
"ಈ ಕೂಡಲೇ ಭಾರತದ ರೂಪಾಂತರಿ ಎಂದು ಉಲ್ಲೇಖವಿರುವ ಎಲ್ಲಾ ಹೆಸರುಗಳು, ವಿಷಯಗಳನ್ನು ತೆಗೆದು ಹಾಕಬೇಕು" ಎಂದು ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರ ತಿಳಿಸಿದೆ.