ಕೊಪ್ಪಳ, ಮೇ.22 (DaijiworldNews/PY): ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದು, "ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕಿರುಕುಳ ನೀಡುತ್ತಿದ್ದಾರೆ" ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಅವರು ತಾವಾಗಿಯೇ ಸಿಎಂ ಸ್ಥಾನದಿಂದ ಕೆಳಗಿಳಿಯಲಿ ಎನ್ನುವ ಕಾರಣಕ್ಕಾಗಿ ಪ್ರಧಾನಿ ಮೋದಿ ಕರ್ನಾಟಕಕ್ಕೆ ಸೂಕ್ತವಾಗಿ ಅನುದಾನವನ್ನು ನೀಡದೇ ನಿರ್ಲಕ್ಷಿಸುತ್ತಿದ್ದಾರೆ. ಡಿ.ವಿ ಸದಾನಂದ ಗೌಡ ಸೇರಿದಂತೆ ರಾಜ್ಯದ ಯಾವ ಸಂಸದರನ್ನು ಪ್ರಧಾನಿ ಮೋದಿ ಅವರು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಕೊರೊನಾದ ಈ ಸಂಕಷ್ಟದ ಸಂದರ್ಭದಲ್ಲಿ ಜನ ಸಾಮಾನ್ಯರ ರಕ್ಷಣೆ ಮಾಡುವ ಕಾರ್ಯವನ್ನು ಮಾಡಬೇಕಿತ್ತು. ಆದರೆ, ಪ್ರಧಾನಿ ಮೋದಿ ಆ ಕಾರ್ಯವನ್ನು ಮಾಡುತ್ತಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕೇಂದ್ರ ಸರ್ಕಾರವು ಕರ್ನಾಟದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ಪ್ರಧಾನಿ ಮೋದಿ ಅವರು ರಾಜ್ಯದ 25 ಸಂಸದರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಕರ್ನಾಟ ಎಂದರೆ ಪ್ರಧಾನಿಗೆ ಅಲರ್ಜಿ" ಎಂದು ಕಿಡಿಕಾರಿದ್ದಾರೆ.