ಕಾಸರಗೋಡು, ಮೇ 21 (DaijiworldNews/SM): ಕೇರಳದಲ್ಲಿ ಲಾಕ್ ಡೌನ್ ವಿಸ್ತರಣೆಗೊಳಿಸಲಾಗಿದ್ದು, ಮೇ 30ರ ತನಕ ಕೇರಳದಲ್ಲಿ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಮೇ 9ರಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸೋಂಕು ಪ್ರಮಾಣ ಇಳಿಕೆಯಾಗದ ಹಿನ್ನಲೆಯಲ್ಲಿ ಲಾಕ್ ಡೌನ್ ವಿಸ್ತರಣೆಗೆ ರಾಜ್ಯ ಸರಕಾರ ತೀರ್ಮಾನಿಸಿ, ಸಿಎಂ ಪಿಣರಾಯಿ ವಿಜಯನ್ ಘೋಷಣೆ ಮಾಡಿದ್ದಾರೆ.
ಇನ್ನು ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುತ್ತಿದ್ದ 480 ಮಂದಿ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ. ಮಾಸ್ಕ್ ಧರಿಸದೆ ಉಲ್ಲಂಘಿಸುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಇದುವರೆಗೆ 1,19,463 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.
ಲಾಕ್ ಡೌನ್ ಅವಧಿಯಲ್ಲಿ ತುರ್ತು ಅಗತ್ಯಗಳಿಗೆ ಪ್ರಯಾಣಿಸುವವರಿಗೆ ಜಿಲ್ಲೆಯಲ್ಲಿ ಇದುವರೆಗೆ 4,014 ಪಾಸ್ ಗಳನ್ನು ಮಂಜೂರು ಮಾಡಲಾಗಿದೆ. 15,948 ಮಂದಿ ಪಾಸ್ ಗಾಗಿ ಅರ್ಜಿ ಸಲ್ಲಿಸಿದ್ದರು. ಕಚೇರಿಯ ಗುರುತು ಚೀಟಿ ಇಲ್ಲದ, ಮನೆ ಗೆಲಸ, ಕಾರ್ಮಿಕರು, ಹೋಂ ನರ್ಸ್ ಮೊದಲಾದವರಿಗೆ ಪಾಸ್ ಗಾಗಿ ಅರ್ಜಿ ಸಲ್ಲಿಸಬಹುದು.
ಜಿಲ್ಲೆಯಿಂದ ಹೊರ ಜಿಲ್ಲೆಗೆ ತೆರಳಲು ಇ- ಪಾಸ್ ಅಗತ್ಯವಾಗಿದೆ. ಸಂಬಂಧಿಕರ ಮರಣ, ವಿವಾಹ, ರೋಗಿಯ ಭೇಟಿ, ರೋಗಿಯ ಚಿಕಿತ್ಸೆಗಾಗಿ ಕರೆದೊಯ್ಯಲು ಈ ಪಾಸ್ ಲಭ್ಯವಾಗಲಿದೆ.