ಬೆಂಗಳೂರು, ಮೇ 21 (DaijiworldNews/SM): ಕರ್ನಾಟಕ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆಯಾಗಿದೆ. ಮತ್ತೆ 14 ದಿನಗಳ ಕಾಲ ಲಾಕ್ಡೌನ್ ವಿಸ್ತರಣೆಗೊಳಿಸಿ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಜೂನ್ 7ರ ತನಕ ಕರ್ನಾಟಕದಲ್ಲಿ ಲಾಕ್ಡೌನ್ ಮುಂದುವರೆಯಲಿದೆ. ಈಗ ಇರುವ ಮಾರ್ಗಸೂಚಿ ಮುಂದುವರಿಕೆ ಸೂಚನೆ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಸಚಿವರುಗಳ ಜೊತೆ ಸಭೆ ನಡೆಸಿ ಚರ್ಚೆ ನಡೆಸಿದ ಬಳಿಕ ಸಿಎಂ ಲಾಕ್ ಡೌನ್ ವಿಸ್ತರಣೆ ಘೋಷಣೆ ಮಾಡಿದ್ದಾರೆ. ಇನ್ನು ಈ ಹಿಂದೆ ಜಾರಿಗೊಳಿಸಿರುವ ಮಾರ್ಗಸೂಚಿಯೇ ಅನ್ವಯವಾಗಲಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಆದರೆ, ಮುಂದಿನ ದಿನಗಳಲ್ಲಿ ಈ ನಿಯಮ ಕಟ್ಟು ನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, 10 ಗಂಟೆಯೊಳಗೆ ಪ್ರತಿಯೂಬ್ಬರು ಕಡ್ಡಾಯವಾಗಿ ಮನೆ ಸೇರಲೇಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಹತ್ತು ಗಂಟೆಯ ಬಳಿಕವೂ ಹಲವಾರು ಮಂದಿ ನಿಯಮ ಉಲ್ಲಂಘಿಸಿ ಸಂಚಾರ ನಡೆಸುತ್ತಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ.