ಬೆಂಗಳೂರು, ಮೇ 21(DaijiworldNews/MS): ಕರ್ನಾಟಕದಲ್ಲಿ ಸೋಂಕಿಗೆ ಒಳಗಾಗುವ ಮಕ್ಕಳ ಸಂಖ್ಯೆಯಲ್ಲಿ ಹಾಗೂ ಪಾಸಿಟಿವ್ ಗೆ ಒಳಗಾಗುವ ಹದಿಹರೆಯರಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಮಾ.18 ರ ಬಳಿಕ ಅಂದರೆ ಕಳೆದ ಎರಡು ತಿಂಗಳಲ್ಲಿ 0-9 ವರ್ಷ ವಯಸ್ಸಿನ ಶೇ.143ರಷ್ಟು ಮಕ್ಕಳಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವುದು ಹಾಗೂ 10-19 ವಯೋಮಾನದ ಮಕ್ಕಳಲ್ಲಿ ಶೇ.160ರಷ್ಟು ಕೊವೀಡ್ ಸೋಂಕು ತಪಾಸಣೆ ಸಂದರ್ಭ ದೃಢಪಟ್ಟಿದೆ.
ಮಾರ್ಚ್ 18 ರಿಂದ ಮೇ 18ರವರೆಗಿನ ಕರ್ನಾಟಕದಲ್ಲಿ ವಾರ್ ರೂಮ್ ಅಂಕಿ-ಅಂಶಗಳ ಪ್ರಕಾರ, 0-9 ವರ್ಷದ 39,846 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಚಿತವಾಗಿದೆ. ಇನ್ನು 10-19 ವರ್ಷದ 1,05,044 ಮಕ್ಕಳಿಗೆ ಕೊವೀಡ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸಾಂಕ್ರಾಮಿಕ ಪಿಡುಗು ಆರಂಭಗೊಂಡು ಇತ್ತೀಚಿನ ಮಾರ್ಚ್ ತಿಂಗಳವರೆಗೆ 0-9 ವರ್ಷದ 27,841 ಹಾಗೂ 10-19 ವರ್ಷದ 65,551 ಮಕ್ಕಳಿಗೆ ಸೋಂಕು ತಗುಲಿದೆ.
ಇನ್ನು ಸೋಂಕಿನಿಂದ ಮೃತಪಟ್ಟ ಮಕ್ಕಳ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ. ಕೊರೊನಾ ಸಾಂಕ್ರಮಿಕದ ಬಳಿಕ 2021 ರ ಮಾರ್ಚ್ 18 ರವರೆಗೆ 28 ಮಕ್ಕಳು ವೈರಸ್ನಿಂದ ಸಾವನ್ನಪ್ಪಿದ್ದರೆ, ಆ ಬಳಿಕ ಅಂದರೆ ಮೇ 18 ರವರೆಗೆ 15 ಮಂದಿ ಸಾವನ್ನಪ್ಪಿದ್ದಾರೆ.
ಇದರೊಂದಿಗೆ ಕಳವಳಕಾರಿ ಸಂಗತಿ ಎಂದರೆ ಕಳೆದ ಎರಡು ತಿಂಗಳಲ್ಲಿ ಹದಿಹರೆಯದವರ ಸಾವು 46 ರಿಂದ 62 ಕ್ಕೆ ಏರಿದೆ. ಮಕ್ಕಳಲ್ಲಿ ಎರಡನೇ ಅಲೆಯು ಮೊದಲಿಗಿಂತ ಮೂರು ಪಟ್ಟು ಮತ್ತು ಹದಿಹರೆಯದವರ ವಿಷಯದಲ್ಲಿ ಎರಡು ಪಟ್ಟು ಹೆಚ್ಚಾಗಿದೆ.
ಮಕ್ಕಳು ಮನೆಯಲ್ಲಿ ವಯಸ್ಕರೊಂದಿಗೆ ನಿಕಟ ಸಂಪರ್ಕಕ್ಕೆ ಬಂದಾಗಿನಿಂದ ಮಕ್ಕಳು ಸುಲಭವಾಗಿ ಸೋಂಕಿಗೆ ಒಳಗಾಗುತ್ತಾರೆ ಹಾಗೂ ಅವರಿಂದ ಇತರರಿಗೆ ವೈರಸ್ ಅನ್ನು ವೇಗವಾಗಿ ಹರಡುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದು ಮಕ್ಕಳ ತಜ್ಞರು ಹೇಳಿದ್ದಾರೆ.