ನವದೆಹಲಿ, ಮೇ.21 (DaijiworldNews/PY): ಭಾರತೀಯ ರಿಸರ್ವ್ ಬ್ಯಾಂಕ್ 99,122 ಕೋಟಿ ರೂ.ಗಳ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಶುಕ್ರವಾರ ತೀರ್ಮಾನಿಸಿದೆ.
ಆರ್ಬಿಐನ ಕೇಂದ್ರ ನಿರ್ದೇಶಕರ ಮಂಡಳಿಯ 589ನೇ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ರಿಸರ್ವ್ ಬ್ಯಾಂಕ್ನ ಲೆಕ್ಕಪರಿಶೋಧಕ ವರ್ಷದಲ್ಲಿ ಎಪ್ರಿಲ್ ತಿಂಗಳಿನಿಂದ ಮಾರ್ಚ್ ತನಕದ ಬದಲಾವಣೆಯೊಂದಿಗೆ ಮಂಡಳಿಯು ಒಂಭತ್ತು ತಿಂಗಳ ಪರಿವರ್ತನೆಯ ಅವಧಿಯಲ್ಲಿ ಆರ್ಬಿಐ ಬ್ಯಾಂಕ್ನ ಕಾರ್ಯದ ಬಗ್ಗೆ ಚರ್ಚೆ ನಡೆಸಿ, ವಾರ್ಷಿಕ ಅನುಮೋದನೆ ನೀಡಿದೆ.
"ಜುಲೈ 2020 ರಿಂದ ಮಾರ್ಚ್ 2021ಕ್ಕೆ ಕೊನೆಗೊಂಡತೆ ಒಂಭತ್ತು ತಿಂಗಳ ಲೆಕ್ಕಪತ್ರದ ಅವದಿಗೆ ಸುಮಾರು 99,122 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಮಂಡಳಿ ಅನುಮೋದನೆ ನೀಡಿದೆ" ಎಂದು ತಿಳಿಸಿದೆ.
ಕಳೆದ ವರ್ಷ ಆರ್ಬಿಐ ಕೇಂದ್ರ ಸರ್ಕಾರಕ್ಕೆ 57,128 ಕೋಟಿ ರೂ.ಗೆ ವರ್ಗಾಯಿಸಿತ್ತು.
ಮಂಡಳಿಯು ಸಭೆಯಲ್ಲಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಜಾಗತಿಕ ಹಾಗೂ ದೇಶೀಯ ಸವಾಲುಗಳು, ಆರ್ಥಿಕತೆಯ ಮೇಲೆ ಕೊರೊನಾದ ಎರಡನೇ ಅಲೆಯ ದುಷ್ಪರಿಣಾಮಗಳನ್ನು ತಗ್ಗಿಸುವ ಸಲುವಾಗಿ ಆರ್ಬಿಐ ಈ ತೀರ್ಮಾನವನ್ನು ಕೈಗೊಂಡಿದೆ.
ಸಭೆಯಲ್ಲಿ ಉಪ ಗವರ್ನರ್ಗಳಾದ ಮಹೇಶ್ ಕುಮಾರ್ ಜೈನ್, ಮೈಕೆಲ್ ದೇಬಬ್ರತಾ ಪತ್ರ, ಎಂ.ರಾಜೇಶ್ವರ ರಾವ್, ಟಿ ರಬಿ ಶಂಕರ್ ಮತ್ತು ಇತರ ನಿರ್ದೇಶಕರಾದ ಎನ್.ಚಂದ್ರಶೇಖರನ್, ಸತೀಶ್ ಕೆ.ಮರಾಠೆ, ಎಸ್ ಗುರುಮೂರ್ತಿ, ರೇವತಿ ಅಯ್ಯರ್ ಮತ್ತು ಸಚಿನ್ ಚತುರ್ವೇದಿ ಪಾಲ್ಗೊಂಡಿದ್ದರು.
ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ದೇಬಶಿಶ್ ಪಾಂಡ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್ ಉಪಸ್ಥಿತರಿದ್ದರು.