ನವದೆಹಲಿ, ಮೇ 21(DaijiworldNews/MS): ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಟಾರ್ಗೆಟ್ ಮಾಡಲು ಕಾಂಗ್ರೆಸ್ 'ಟೂಲ್ಕಿಟ್' ಸಿದ್ಧಪಡಿಸಿದೆ ಎಂದು ಆರೋಪಿಸಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಟ್ವೀಟ್ ಮೂಲಕ ಹಂಚಿಕೊಂಡಿರುವ ಮಾಹಿತಿಗೆ 'ತಿರುಚಲ್ಪಟ್ಟಿರುವ ಮಾಧ್ಯಮ' ಎಂಬುದಾಗಿ ಟ್ವಿಟರ್ ಗುರುತು ಹಾಕಿದೆ.
ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ 'ಟೂಲ್ಕಿಟ್' ಮೂಲಕ ಕಾಂಗ್ರೆಸ್ ಪಕ್ಷ ಸಿದ್ದಪಡಿಸಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಸುಳ್ಳು ಮಾಹಿತಿ ಹರಡಿ ಬಿಜೆಪಿ ಸಮಾಜದ ಶಾಂತಿ ಭಂಗಕ್ಕೆ ಯತ್ನಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ನಡುವೆ ಟ್ವೀಟರ್ "ತಿರುಚಲ್ಪಟ್ಟಿರುವ ಮಾಧ್ಯಮ" ಎಂದು ಗುರುತು ಹಾಕುವ ಮೂಲಕ ಈ ವಿಚಾರ ಮತ್ತಷ್ಟು ಚರ್ಚೆಗೆ ನಂದಿ ಹಾಡಿದೆ. ಟ್ವೀಟ್ ಮಾಡುವ ಮೂಲಕ ಹಂಚಿಕೊಳ್ಳಲಾಗುವ ಈ ರೀತಿಯ ವಿಡಿಯೊ, ಧ್ವನಿಮುದ್ರಿಕೆ ಹಾಗೂ ಪೋಟೋಗಳನ್ನು ತಪ್ಪುದಾರಿಗೆಳೆಯುವ ಉದ್ದೇಶದಿಂದ ತಿರುಚಿರುವುದು ಅಥವಾ ಕಲ್ಪಿತ ಮಾಹಿತಿ ಎಂಬುದಾಗಿ ಗುರುತು ಮಾಡಲಾಗುವುದು' ಎಂದು ಟ್ವಿಟರ್ ಹೇಳಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವು ಬಿಜೆಪಿ ಮುಖಂಡರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸುವಂತೆ ಎಂದು ಕಾಂಗ್ರೆಸ್ ನಾಯಕರು ಟ್ವಿಟರ್ಗೆ ಗುರುವಾರ ಪತ್ರ ಬರೆದಿದೆ. ಇದಲ್ಲದೆ ಟೂಲ್ ಕಿಟ್ ವಿಚಾರವಾಗಿ ಕಾಂಗ್ರೆಸ್ ನೀಡಿದ ದೂರಿನನ್ವಯ ಛತ್ತೀಸ್ ಗಡ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.