ಕಲಬುರ್ಗಿ, ಮೇ.21 (DaijiworldNews/PY): "ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಸಾವಿನ ಸಂಖ್ಯೆ ಏರಿಕೆಯಾಗಲು ಕಾಂಗ್ರೆಸ್ ಕಾರಣ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಎರಡು ದಿನಗಳ ಹಿಂದೆ ಕೊರೊನಾಗೆ ಬಲಿಯಾದ ಕಲಬುರಗಿ ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ತೂಗಾಂವಕರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಶುಕ್ರವಾರ ಬೀದರ್ಗೆ ತೆರಳುವ ಮೊದಲು ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ಸಿಗರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದರು. ಅದು ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದೆಲ್ಲಾ ಅಪಪ್ರಚಾರ ಮಾಡಿದರು. ಈ ಕಾರಣದಿಂದ ಜನರು ಲಸಿಕೆ ಪಡೆದುಕೊಳ್ಳಲು ಹಿಂಜರಿದರು. ಇದರ ಪರಿಣಾಮದಿಂದ ಈ ಸೋಂಕು ಹಾಗೂ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ" ಎಂದಿದ್ದಾರೆ.
"ಕಾಂಗ್ರೆಸ್ ಲಸಿಕೆ ವಿಚಾರವಾಗಿ ಅಪಪ್ರಚಾರ ಮಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಸತ್ಯ. ಲಸಿಕೆಯ ಬಗ್ಗೆ ಕಾಂಗ್ರೆಸ್ ಸುಳ್ಳು ಹೇಳಿಕೆಗಳನ್ನು ನೀಡಿ ಜನರು ಲಸಿಕೆಯಿಂದ ದೂರ ಉಳಿಯುವಂತೆ ಮಾಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಲಸಿಕೆ ಪಡೆದು ಜನರಿಗೆ ಪ್ರೇರಣೆ ನೀಡಿದ್ದಾರೆ. ಹೀಗಾದರೂ ಕೂಡಾ ಮೇ ತಿಂಗಳವರೆಗೂ ಜನರು ಲಸಿಕೆ ಹಾಕಿಸಿಕೊಳ್ಳಲು ತಯಾರಿರಲಿಲ್ಲ. ಆದರೆ, ಈಗ ಕೈ ನಾಯಕರು ಲಸಿಕೆ ಕೊರತೆಯಾಗಿದೆ ಎನ್ನುತ್ತಿದ್ದಾರೆ" ಎಂದಿದ್ದಾರೆ.
"ಕಾಂಗ್ರೆಸ್ ದೇಶವಿರೋಧಿ ಕಾರ್ಯದಲ್ಲಿ ತೊಡಗಿದ್ದಾರೆ. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಹೊರತಾಗಿಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಏನು ಮಾಡುತ್ತದೋ ಅದೇ ರೀತಿ ಮಾಡುತ್ತಾರೆ. ಸಿದ್ದರಾಮಯ್ಯ ಅವರು ಇದೇ ರೀತಿ ಮಾಡಿದ್ದಲ್ಲಿ ಅವರನ್ನು ಬಾದಾಮಿಯಿಂದಲೂ ಜನರು ಓಡಿಸುತ್ತಾರೆ" ಎಂದು ವ್ಯಂಗ್ಯವಾಡಿದರು.