ನವದೆಹಲಿ, ಮೇ.21 (DaijiworldNews/PY): ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 30ನೇ ವರ್ಷದ ಪುಣ್ಯತಿಥಿ ಹಿನ್ನೆಲೆ ಅವರ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ ಹಾಗೂ ಹಲವು ರಾಜಕೀಯ ನಾಯಕರು, ಗಣ್ಯರು ಅವರನ್ನು ಸ್ಮರಿಸಿದ್ದಾರೆ.
ಇಂದು ಬೆಳಗ್ಗೆ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿರುವ ರಾಜೀವ್ ಗಾಂಧಿ ಸ್ಮಾರಕಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದ್ದಾರೆ. "ಸತ್ಯ, ಸಹಾನುಭೂತಿ, ಪ್ರಗತಿಗೆ ಇನ್ನೊಂದು ಹೆಸರೇ ರಾಜೀವ್ ಗಾಂಧಿ" ಎಂದು ಟ್ವೀಟ್ ಮಾಡಿದ್ದಾರೆ.
"ಪ್ರೀತಿಗಿಂತ ದೊಡ್ಡ ಶಕ್ತಿ ಇಲ್ಲ, ದಯೆಗಿಂತ ದೊಡ್ಡ ಧೈರ್ಯವಿಲ್ಲ. ಸಹಾನುಭೂತಿಗಿಂತ ದೊಡ್ಡ ಶಕ್ತಿ ಇಲ್ಲ. ನಮ್ರತೆಗಿಂತ ದೊಡ್ಡ ಶಿಕ್ಷಕನಿಲ್ಲ" ಎಂದು ಪ್ರಿಯಾಂಕ ಗಾಂದಿ ಟ್ವೀಟ್ ಮಾಡಿದ್ದಾರೆ.
"ದೇಶ ಕಂಡ ಅಪ್ರತಿಮ ನೇತಾರ ನವಭಾರತ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದ ನಮ್ಮೆಲ್ಲರ ದಾರಿದೀಪ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳು" ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.
1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣೆ ರ್ಯಾಲಿ ನಡೆಯುತ್ತಿದ್ದ ಸಂದರ್ಭ ರಾಜೀವ್ ಗಾಂಧಿ ಅವರು ಭಾಗವಹಿಸಿದ್ದ ಸಂದರ್ಭ ಎಲ್ಟಿಟಿಇ ಕಾರ್ಯರ್ತರ ಆತ್ಮಹತ್ಯಾ ದಾಳಿಗೆ ಬಲಿಯಾಗಿದ್ದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 30ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರಾಜೀವ್ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಯಿತು.
ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾ ರೆಡ್ಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.