ಪಣಜಿ, ಮೇ.21 (DaijiworldNews/PY): ಸಹೋದ್ಯೋಗಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅತ್ಯಾಚಾರ ಪ್ರರಕಣದಲ್ಲಿ ತೇಜ್ಪಾಲ್ ನಿರ್ದೋಷಿ ಎಂದು ಗೋವಾ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.
ಪ್ರಕಣದ ಸಂಬಂಧ ತೀರ್ಪನ್ನು ಮೇ 21ರಂದು ಪ್ರಕಟಿಸಿವುದಾಗಿ ಗೋವಾ ಸೆಷನ್ಸ್ ನ್ಯಾಯಾಲಯ ತಿಳಿಸಿತ್ತು. ಇದೀಗ ತೀರ್ಪು ಪ್ರಕಟಿಸಿರುವ ನ್ಯಾಯಾಲಯ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೇಜ್ಪಾಲ್ ನಿರ್ದೋಷಿ, ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂದು ತೀರ್ಪು ನೀಡಿದೆ.
2013ರಲ್ಲಿ ಐಷಾರಾಮಿ ಹೊಟೇಲ್ನ ಲಿಫ್ಟ್ನಲ್ಲಿ ಮಹಿಳಾ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ತೇಜ್ಪಾಲ್ ವಿರುದ್ದ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜ್ಪಾಲ್ ಅವರನ್ನು ಬಂದಿಸಲಾಗಿತ್ತು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜ್ಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆಗಸ್ಟ್ನಲ್ಲಿ ಈ ಪ್ರಕರಣದ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ತೇಜ್ಪಾಲ್ ಅವರ ಅರ್ಜಿ ವಜಾಗೊಳಿಸಿ, ಅರೋಪವನ್ನು ಕೈಬಿಡಲು ಸಾಧ್ಯವಿಲ್ಲ ಎಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ಗೋವಾ ಕೋರ್ಟ್ ತಿಳಿಸಿತ್ತು.