ನವದೆಹಲಿ, ಮೇ.21 (DaijiworldNews/PY): "ದೇಶದಲ್ಲಿ ಶೇ.50ರಷ್ಟು ಮಂದಿ ಮಾಸ್ಕ್ ಧರಿಸುವುದಿಲ್ಲ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಸಾಂದರ್ಭಿಕ ಚಿತ್ರ
ದೇಶದ 25 ನಗರಗಳಲ್ಲಿ ಸಮೀಕ್ಷೆ ನಡೆಸಿರುವ ಆರೋಗ್ಯ ಇಲಾಖೆ, "ದೇಶದ ಶೇ.50ರಷ್ಟು ಮಂದಿ ಮಾಸ್ಕ್ ಧರಿಸುವುದಿಲ್ಲ. ಶೇ.14ರಷ್ಟು ಮಂದಿ ಮಾತ್ರವೇ ಸರಿಯಾಗಿ ಮಾಸ್ಕ್ ಧರಿಸುತ್ತಾರೆ. ಶೇ.20ರಷ್ಟು ಮಂದಿ ಕೇವಲ ಬಾಯಿಗೆ ಮಾತ್ರ ಮಾಸ್ಕ್ ಹಾಕುತ್ತಾರೆ. ಶೇ.20ರಷ್ಟು ಮಂದಿ ಕೆನ್ನೆಯ ಮೇಲೆ ಮಾಸ್ಕ್ ಧರಿಸುತ್ತಾರೆ" ಎಂದು ಮಾಹಿತಿ ನೀಡಿದೆ.
"ಶೇ.2ರಷ್ಟು ಮಂದಿಯ ಕುತ್ತಿಗೆ ಮೇಲೆ ಮಾಸ್ಕ್ ಇರುತ್ತದೆ. ಕ್ಲಿಪ್ ಹೊಂದಿರುವ ಮಾಸ್ಕ್ ಅನ್ನು ಮೂಗು, ಬಾಯಿ ಕೆನ್ನೆಗಳ ಮೇಲೆ ಧರಿಸುತ್ತಾರೆ" ಎಂದು ಸಮೀಕ್ಷೆ ಹೇಳಿದೆ.
ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು, ಆರೋಗ್ಯ ಇಲಾಖೆಯ ಸಮೀಕ್ಷೆಯನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ದೇಶದ 8 ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. 9 ರಾಜ್ಯಗಳಲ್ಲಿ 50,000 ದಿಂದ 1 ಲಕ್ಷದವರೆಗೆ ಸಕ್ರಿಯ ಪ್ರಕರಣಗಳಿದ್ದು. 19 ರಾಜ್ಯಗಳಲ್ಲಿ 50 ಸಾವಿರಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ.
ಕಳೆದ 24 ಗಂಟೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರವು ಶೇ.13.44ರಷ್ಟಿದೆ. ಒಟ್ಟು ಪ್ರಕರಣಗಳ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಪಶ್ಚಿಮಬಂಗಾಳ, ಕೇರಳ, ಒಡಿಶಾ, ಆಂಧ್ರಪ್ರದೇಶ ಹರಿಯಾಣ, ರಾಜಸ್ಥಾನ ಹಾಗೂ ಉತ್ತರಪ್ರದೇಶದಿಂದ ಶೇ.77.17ರಷ್ಟು ಪ್ರಕರಣಗಳು ವರದಿಯಾಗಿವೆ.
ಕೊರೊನಾ ನಿಯಂತ್ರಣಕ್ಕಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಗುರುವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಶುಚಿತ್ವ ಹಾಗೂ ಸಾಕಷ್ಟು ಗಾಳಿ ಇರುವಂತೆ ಗಮನಿಸುವುದರ ಬಗ್ಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.