ಪಂಜಾಬ್, ಮೇ 21(DaijiworldNews/MS): ಭಾರತೀಯ ವಾಯುಪಡೆಗೆ ಸೇರಿದ ಮಿಗ್ - 21 ಯುದ್ದ ವಿಮಾನವು ಪಂಜಾಬ್ ನ ಮೋಗ ಬಳಿ ಪತನವಾಗಿದ್ದು, ಪೈಲಟ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋಗಾದ ಬಾಘಪುರಾನದ ಲಂಗಿಯಾನ ಖರ್ದ್ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಒಂದು ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ ಭಾರತೀಯ ವಾಯು ಸೇನೆಯ ಎಂಸಿಸಿ ಸ್ಕ್ವಾರ್ಡನ್ ಲೀಡರ್ ಅಭಿನವ್ ಚೌಧರಿ ಸಾವಿಗೀಡಾಗಿದ್ದಾರೆ. ನಾಲ್ಕು ಗಂಟೆಗಳ ಹುಡುಕಾಟದ ನಂತರ, ಅಪಘಾತದ ಸ್ಥಳದಿಂದ ಸುಮಾರು 2 ಕಿ.ಮೀ ದೂರದಲ್ಲಿ ಪೈಲಟ್ ನ ಮೃತದೇಹ ಪತ್ತೆಯಾಗಿದೆ.
ಐಎಎಫ್ ವಿಮಾನವು ದಿನನಿತ್ಯದ ತರಬೇತಿ ಹಂತದಲ್ಲಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಿಗ್ - 21ಪತನಕ್ಕೆ ಇನ್ನು ಕಾರಣ ತಿಳಿದುಬಂದಿಲ್ಲ.