ಮೈಸೂರು, ಮೇ.20 (DaijiworldNews/PY): "ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೇ. 23 ರಂದು ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಅಂಕಿ-ಅಂಶಗಳನ್ನು ಗಮನಿಸಿ ಮತ್ತಷ್ಟು ಕ್ರಮ ಬಿಗಿ ಮಾಡಬೇಕೋ ಬೇಡವೋ ಎನ್ನುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಲ್ಲದೇ ಸಾರ್ವಜನಿಕ ವಲಯ ಹಾಗೂ ವಿಪಕ್ಷಗಳ ಸಲಹೆಗಳನ್ನು ಪರಿಗಣಿಸಬೇಕಾಗುತ್ತದೆ" ಎಂದಿದ್ದಾರೆ.
ಬ್ಲ್ಯಾಕ್ ಫಂಗಸ್ ರೋಗದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬ್ಲಾಕ್ ಫಂಗಸ್ನಿಂದ ರಾಜ್ಯದಲ್ಲಿ ಯಾರೂ ಮೃತಪಟ್ಟಿಲ್ಲ. ಮಂಡ್ಯದಲ್ಲಿ ಮೂರು ಪ್ರಕರಣಗಳು ಕಂಡುಬಂದಿದೆ ಎಂದು ಹೇಳಲಾಗಿತ್ತು. ಆದರೆ, ಆ ಮೂವರಲ್ಲಿ ಎರಡು ಬ್ಲ್ಯಾಕ್ ಫಂಗಸ್ ಪ್ರಕರಣವಲ್ಲ. ಮೈಸೂರಿನ ಸಾವು ಪ್ರಕರಣದ ಕುರಿತು ಮಾಹಿತಿ ಇಲ್ಲ" ಎಂದು ಹೇಳಿದ್ದಾರೆ.
"ಬ್ಲ್ಯಾಕ್ ಫಂಗಸ್ಗೆ ಔಷಧಿ ಕೊರತೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ನಡೆಸಿ ಚಿಕಿತ್ಸೆ ನೀಡುತ್ತಿದ್ದೇವೆ. ಅವಶ್ಯವಿರುವ ಔಷಧಿ ಪೂರೈಕೆಗೆ ಕೆಲವೇ ವಾರಗಳಲ್ಲಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ" ಎಂದಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಉತ್ತಮ ಕಾರ್ಯ ಮಾಡುತ್ತಿದೆ. ಪಕ್ಷದಲ್ಲಿ ಅಥವಾ ಬೇರೆ ಕಡೆ ನಾಯಕತ್ವದ ಬಗ್ಗೆ ಚರ್ಚೆ ನಡೆದಿಲ್ಲ" ಎಂದು ಹೇಳಿದ್ದಾರೆ.