ನವದೆಹಲಿ, ಮೇ 20 (DaijiworldNews/MS): ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಅವರು ಬರೆದ ಪತ್ರದಲ್ಲಿ ಪೋಷಕರನ್ನು ಕಳೆದುಕೊಂಡು ಈ ಮಕ್ಕಳಿಗೆ ಆದ ಅಪಾರ ನಷ್ಟದ ಬಗ್ಗೆ ಆಘಾತವಿದೆ, ಇಂತಹ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಭವಿಷ್ಯದ ಭದ್ರತೆ ಇಲ್ಲ ಹೀಗಾಗಿ ಸಾಂಕ್ರಮಿಕದ ದುರಂತದ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಳಿಗಾಗಿ ಈ ದೇಶವೂ ಉತ್ತಮ ಭವಿಷ್ಯದ ಭರವಸೆ ನೀಡಬೇಕಾಗಿದೆ. ಹೀಗಾಗಿ ಈ ಮಕ್ಕಳಿಗೆ ನವೋದಯ ವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ಒದಗಿಸಲು ಒತ್ತು ನೀಡಬೇಕು ಎಂದೂ ಸಲಹೆ ಮಾಡಿದ್ದಾರೆ.
'ತಂದೆ, ತಾಯಿ ಅಥವಾ ಇಬ್ಬರನ್ನೂ ಕಳೆದುಕೊಂಡಿರುವ ಅನೇಕ ನಿದರ್ಶನಗಳಿವೆ. ಈಗ ಅಂತಹ ಮಕ್ಕಳ ಜೊತೆಗೆ ದೇಶ ನಿಲ್ಲಬೇಕಾಗಿದೆ. ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ತಮ್ಮ ಪತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಿದ್ದರು. ದೇಶದಾದ್ಯಂತ ಇಂಥ 661 ಶಾಲೆಗಳಿವೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.