ನವದೆಹಲಿ, ಮೇ 20 (DaijiworldNews/MS): ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲು ಕೇಂದ್ರ ಸರಕಾರ ಎಲ್ಲಾ ರಾಜ್ಯಗಳನ್ನು ಕೇಳಿಕೊಂಡಿದೆ. ಇದನ್ನು "ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಸೂಚಿಸಬಹುದಾದ ರೋಗ" ವನ್ನಾಗಿ ಮಾಡಲು ಆರೋಗ್ಯ ಸಚಿವಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಗಳಿಗೆ ಪತ್ರ ಬರೆದಿದೆ.
ಈ ಸೋಂಕು ಕೊವೀಡ್ -19 ರೋಗಿಗಳಲ್ಲಿ ದೀರ್ಘಕಾಲದ ಕಾಯಿಲೆ ಮತ್ತು ಮರಣಕ್ಕೆ ಕಾರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಮ್ಯೂಕೋರ್ಮೈಕೋಸಿಸ್ ಎಂಬ ಶಿಲೀಂಧ್ರ ಸೋಂಕಿನ ರೂಪದಲ್ಲಿ ದೇಶದಲ್ಲಿ ಹೊಸ ಸವಾಲು ಹುಟ್ಟಿಕೊಂಡಿದೆ. ವಿಶೇಷವಾಗಿ ಸ್ಟೀರಾಯ್ಡ್ ಚಿಕಿತ್ಸೆ ಪಡೆದವರಲ್ಲಿ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರ ಕೊವೀಡ್ -19 ರೋಗಿಗಳಲ್ಲಿ ಕಂಡುಬರುತ್ತಿರುವ ಬ್ಲ್ಯಾಕ್ ಫಂಗಸ್ ಅನೇಕ ರಾಜ್ಯಗಳಿಂದ ವರದಿಯಾಗಿದೆ.
ಕೋವಿಡ್ ನಿಂದ ಚೇತರಿಸಿಕೊಳ್ಳುವ ರೋಗಿಗಳಲ್ಲಿ ಕಂಡುಬರುವ ಶಂಕಿತ ಹಾಗೂ ದೃಢಪಟ್ಟ ಕಪ್ಪು ಶಿಲೀಂಧ್ರ ಪ್ರಕರಣಗಳ ಬಗ್ಗೆ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಆರೋಗ್ಯ ಇಲಾಖೆಗೆ ವರದಿ ಸಲ್ಲಿಸುವುದು ಕಡ್ಡಾಯ ಎಂದೂ ಸೂಚಿಸಲಾಗಿದೆ. ಎಲ್ಲಾ ಸರಕಾರಿ ಹಾಗೂ ಖಾಸಗಿ ಆರೋಗ್ಯ ವ್ಯವಸ್ಥೆಗಳು ಹಾಗೂ ವೈದ್ಯಕೀಯ ಕಾಲೇಜುಗಳು ತಪಾಸಣೆ, ರೋಗನಿರ್ಣಯ, ಮ್ಯೂಕೋರ್ಮೈಕೋಸಿಸ್ ನಿರ್ವಹಣೆಗಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ರಾಜ್ಯಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ತೆಲಂಗಾಣ ಮತ್ತು ರಾಜಸ್ಥಾನಗಳು ಈಗಾಗಲೇ ಮ್ಯೂಕೋರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿವೆ.