ನವದೆಹಲಿ, ಮೇ.20 (DaijiworldNews/PY): "ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ. ಹಾಗಾಗಿ ನಮಗೆ ಅವಮಾನವಾಗಿದೆ" ಎಂದು ಪಶ್ಷಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
10 ರಾಜ್ಯಗಳ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳೊಂದಿಗೆ ಪ್ರಧಾನಿ ಮೋದಿ ಅವರ ಭೇಟಿಯ ನಂತರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ, "ಕೊರೊನಾ ನಿರ್ವಹಣೆ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ನಡೆದ ಸಂವಾದದಲ್ಲಿ ಇತರರಿಗೆ ಮಾತನಾಡಲು ಅವಕಾಶ ನೀಡಿಲ್ಲ. ಇದರಿಂದ ಚರ್ಚೆಯಲ್ಲಿ ಅವಮಾನವಾಗಿದೆ" ಎಂದಿದ್ದಾರೆ.
"ಸಭೆಗೆ ಸಿಎಂಗಳನ್ನು ಆಹ್ವಾನಿಸಿದ ಬಳಿಕವೂ ಪ್ರಧಾನಿ ಮೋದಿ ಅವರು ನಮ್ಮೊಂದಿಗೆ ಮಾತನಾಡದೇ ಇರುವುದು ದುರಾದೃಷ್ಟಕರ. ಸಭೆಯಲ್ಲಿ ಕೆಲ ಬಿಜೆಪಿ ಸಿಎಂಗಳು ಹಾಗೂ ಪ್ರಧಾನಿ ಮಾತ್ರವೇ ಸಣ್ಣ ಭಾಷಣ ಮಾಡಿದರು. ಬಳಿಕ ಸಭೆಯನ್ನು ಮುಕ್ತಾಯಗೊಳಿಸಿದರು. ನಮಗೆ ಮಾತನಾಡಲು ಅವಕಾಶವೇ ನೀಡಿಲ್ಲ" ಎಂದು ಹೇಳಿದ್ದಾರೆ.
"ಸಭೆಯಲ್ಲಿ ನಮಗೆ ಅವಮಾನವಾಗಿದೆ. ಈ ವೇಳೆ ಕೊರೊನಾ ಲಸಿಕೆ ಬಗ್ಗೆ ಅಥವಾ ರೆಮ್ಡಿಸಿವರ್ ಔಷಧಿ ಬಗ್ಗೆ ಕೇಳಿಲ್ಲ. ಬ್ಲ್ಯಾಕ್ ಫಂಗಸ್ ಬಗ್ಗೆಯೂ ಕೇಳಿಲ್ಲ. ಸಭೆಯಲ್ಲಿ ನಾನು ಲಸಿಕೆಯ ಕೊರತೆಯ ಕುರಿತು ಮಾತನಾಡಲು ಇಚ್ಛಿಸಿದ್ದೆ. ಅದಕ್ಕೆ ಅವಕಾಶ ಸಿಕ್ಕಿಲ್ಲ" ಎಂದಿದ್ದಾರೆ.