ಹೈದರಾಬಾದ್, ಮೇ.20 (DaijiworldNews/PY): ತೆಲಂಗಾಣ ಸರ್ಕಾರವು, ಕಪ್ಪು ಶಿಲೀಂಧ್ರ ರೋಗ (ಬ್ಲ್ಯಾಕ್ ಫಂಗಸ್) ಅನ್ನು ಸಾಂಕ್ರಾಮಿಕ ರೋಗ ಎಂದು ಗುರುವಾರ ಘೋಷಿಸಿದ್ದು, ಈ ಬಗ್ಗೆ ಸಾಂಕ್ರಾಮಿಕ ರೋಗಗಳ ಕಾಯ್ದೆ -1897ರಡಿ ಅಧಿಸೂಚನೆ ಹೊರಡಿಸಿದೆ.
"ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಶಂಕಿತ ಹಾಗೂ ರೋಗ ದೃಢಪಟ್ಟ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಕುರಿತು ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಬೇಕು. ಇದು ಕಡ್ಡಾಯ" ಎಂದು ತೆಲಂಗಾಣ ಸರ್ಕಾರ ಸೂಚಿಸಿದೆ.
"ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಐಸಿಎಂಆರ್, ಬ್ಲ್ಯಾಕ್ ಫಂಗಸ್ ರೋಗದ ಪತ್ತೆ ಹಾಗೂ ಚಿಕಿತ್ಸೆಯ ಬಗ್ಗೆ ನೀಡಿರುವ ಮಾರ್ಗಸೂಚಿಗಳನ್ನು ಎಲ್ಲಾ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಪಾಲಿಸಬೇಕು" ಎಂದು ತಿಳಿಸಿದೆ.
ಬ್ಲ್ಯಾಕ್ ಫಂಗಸ್ ರೋಗದ ಚಿಕಿತ್ಸೆಗಾಗಿ ಗಾಂಧಿ ಜನರಲ್ ಆಸ್ಪತ್ರೆ ಹಾಗೂ ರಾಜ್ಯ ಸರ್ಕಾರದ ಇಎನ್ಟಿ ಆಸ್ಪತ್ರೆಗಳನ್ನು ನೋಡಲ್ ಕೇಂದ್ರಗಳಾಗಿ ನಿಯೋಜನೆ ಮಾಡಲಾಗಿದೆ.