ಬೆಂಗಳೂರು, ಮೇ.20 (DaijiworldNews/PY): "ಜನರು ಲಾಕ್ಡೌನ್ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಈ ನಿಟ್ಟಿನಲ್ಲಿ ನಿಯಮಗಳ ಜಾರಿಗೆ ಪೊಲೀಸರು ಕೈಗೊಂಡಿರುವ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಸೋಂಕು ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಿಸುತ್ತಿದೆ. ಅನಗತ್ಯವಾಗಿ ಜನರು ಮನೆಯಿಂದ ಹೊರಗೆ ಬರುತ್ತಿದ್ದಾರೆ. ಯಾದಗಿರಿಯಲ್ಲಿ ವಿವಾಹ ಕಾರ್ಯಕ್ರವೊಂದಕ್ಕೆ ಐದು ಮಂದಿ ಬೈಕ್ನಲ್ಲಿ ತೆರಳುತ್ತಿದ್ದರು. ಈ ಹಿನ್ನೆಲೆ ವಾಹನಗಳನ್ನು ಜಪ್ತಿ ಮಾಡುವ ಕಾರ್ಯ ಇನ್ನಷ್ಟು ಬಿಗಿಗೊಳಿಸಲಾಗುವುದು" ಎಂದು ಹೇಳಿದ್ದಾರೆ.
"ಕೊರೊನಾ ಹಿನ್ನೆಲೆ ಗ್ರಾಮಾಂತ್ರ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಗಳು 3-4 ದಿನ ಲಾಕ್ಡೌನ್ ಜಾರಿ ಮಾಡಿದ್ದರೂ ಕೂಡಾ ಜನರು ಕ್ಯಾರೇ ಅನ್ನುತ್ತಿಲ್ಲ. ಅಲ್ಲದೇ, ಲಾಕ್ಡೌನ್ ನಿಯಮಗಳನ್ನು ಪಾಲಿಸದೇ, ಸಹಕಾರ ನೀಡುತ್ತಿಲ್ಲ. ಜನರು ಹೀಗೆ ಮಾಡಿದ್ದಲ್ಲಿ ಕೊರೊನಾ ನಿಯಂತ್ರಣ ಕಷ್ಟವಿದೆ" ಎಂದಿದ್ದಾರೆ.
ಆರ್ಥಿಕ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಆರ್ಥಿಕ ಸಂಕಷ್ಟದ ಮಧ್ಯೆಯೂ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಜನರಿಗೆ ಸಹಾಯ ಮಾಡಬೇಕು ಎನ್ನುವ ಕುರಿತು ಪರಿಶೀಲಿಸುತ್ತೇನೆ. ಈ ಎಲ್ಲಾ ವಿಚಾರಗಳು ಸಿಎಂ ಅವರ ಗಮನದಲ್ಲಿದೆ" ಎಂದು ತಿಳಿಸಿದ್ದಾರೆ.