ಬೆಂಗಳೂರು, ಮೇ.20 (DaijiworldNews/PY): "ಚುನಾವಣಾ ಭಾಷಣಗಳಲ್ಲಿ ಡಬಲ್ ಇಂಜಿನ್ ಸರ್ಕಾರ ಸ್ವರ್ಗ ಕಾಲು ಮುರಿದುಕೊಂಡು ಕರ್ನಾಟಕದಲ್ಲಿಯೇ ಬಿದ್ದಿರುತ್ತದೆ ಎಂದು ಪುಂಖಾನುಪುಂಖವಾಗಿ ಮಾತನಾಡಿದ ಬಿಜೆಪಿ ನಾಯಕರೇ ಈಗೇನಾಯಿತು?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕರೋನಾ ಬಂದು ವರ್ಷ ಕಳೆದಿದೆ, ತಜ್ಞರ ಎಚ್ಚರಿಕೆಗೂ ಹಲವು ತಿಂಗಳುಗಳು ಕಳೆದಿವೆ, ಎಲ್ಲಾ ಸಿದ್ಧತೆಗಳಿಗೂ ಅವಕಾಶಗಳಿದ್ದವು, ಸಮಯವೂ ಇತ್ತು. ಇಷ್ಟಿದ್ದರೂ ಬೇಜವಾಬ್ದಾರಿತನದಿಂದ ನಡೆದುಕೊಂಡು ರಾಜ್ಯದ ಜನತೆಯ ಜೀವಕ್ಕೆ ಮುಳುವಾಗಿದೆ ಸರ್ಕಾರ. ಬಿಜೆಪಿ ಸರ್ಕಾರ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈ ಪ್ರಶ್ನೆಗಳಿಗೆ ಉತ್ತರಿಸುವ ದೈರ್ಯವಿದೆಯೇ?" ಎಂದು ಪ್ರಶ್ನಿಸಿದೆ.
"ಕಳೆದ ಒಂದು ವರ್ಷದಿಂದಲೂ ಸಂಪುಟ ಗಲಾಟೆ, ಆಂತರಿಕ ಕಿತ್ತಾಟ, ಭ್ರಷ್ಟಾಚಾರ, ಸಿಡಿ ಗಲಾಟೆಯಲ್ಲಿಯೇ ಮುಳುಗಿದ ಸರ್ಕಾರ ಕರೋನಾ ಎದುರಿಸಲು ವೈದ್ಯಕೀಯ ಕ್ಷೇತ್ರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರಲಿಲ್ಲ ಏಕೆ?" ಎಂದು ಕೇಳಿದೆ.
"ಚಾಮರಾಜನಗರವೂ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಆಕ್ಸಿಜನ್ ಕೊರತೆಯಿಂದ ಹಲವು ಮಂದಿ ಸಾವನಪ್ಪಿದ್ದಾರೆ, ಆಕ್ಸಿಜನ್ ಪೂರೈಸದಿರುವುದು ಸರ್ಕಾರದ ಬಹುದೊಡ್ಡ ವೈಫಲ್ಯ, ಇಷ್ಟಾದರೂ ಈ ದುರ್ಘಟನೆಗಳಿಗೆ ಯಾವೊಬ್ಬ ಸಚಿವರೂ ಹೊಣೆ ಹೊರಲಿಲ್ಲ ಏಕೆ?. ಆರೋಗ್ಯ ಸಚಿವರು ಸುಳ್ಳು ಹೇಳಿದರೂ ಅವರ ರಾಜೀನಾಮೆ ಪಡೆಯಲಿಲ್ಲ ಏಕೆ ಬಿಎಸ್ವೈ ಅವರೇ?" ಎಂದು ಪ್ರಶ್ನಿಸಿದೆ.
"ರಾಜ್ಯಕ್ಕೆ ದಿನವೊಂದಕ್ಕೆ ಸುಮಾರು 1800 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ ಎಂದು ಸರ್ಕಾರದ ಅಂಕಿ ಅಂಶಗಳೇ ಹೇಳುತ್ತವೆ, ವಾಸ್ತವದಲ್ಲಿ ಇನ್ನೂ ಹೆಚ್ಚಿದೆ. ಇದನ್ನು ಪೂರೈಸಲು ಸರ್ಕಾರಕ್ಕೆ ಕಾಳಜಿ ಇಲ್ಲವೇ, ಕೋರ್ಟುಗಳೇ ಚಾಟಿ ಬೀಸಬೇಕೇ? ಕೋರ್ಟುಗಳ ನಿರ್ದೇಶನದ ನಂತರವೂ ರಾಜ್ಯದ ಬೇಡಿಕೆಗೆ ಅನುಗುಣವಾಗಿ ಆಕ್ಸಿಜನ್ ಪೂರೈಸದಿರುವುದೇಕೆ? ಲಸಿಕೆ ವಿಚಾರದಲ್ಲಿ ಬಿಜೆಪಿ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಚಾರಕ್ಕಾಗಿ ಲಸಿಕೆ ಉತ್ಸವ ಎಂಬ ಬೂಟಾಟಿಕೆ ಆಡಿದ್ದೇಕೆ? ಜನತೆಯನ್ನು ಗೊಂದಲಕ್ಕೆ ದೂಡಿದ್ದೇಕೆ? ಲಸಿಕೆ ತರಿಸಿಕೊಳ್ಳದೆಯೇ, ಆರ್ಡರ್ ಮಾಡದೆಯೇ ಕುಳಿತಿದ್ದೇಕೆ? ಲಸಿಕೆ ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯ ಪ್ರಶ್ನಿಸದೆ 25 ಸಂಸದರು ಅಡಗಿ ಕುಳಿತಿದ್ದೆಲ್ಲಿ?" ಎಂದು ಕೇಳಿದೆ.
"ಚುನಾವಣಾ ಭಾಷಣಗಳಲ್ಲಿ ಡಬಲ್ ಇಂಜಿನ್ ಸರ್ಕಾರ ಸ್ವರ್ಗ ಕಾಲು ಮುರಿದುಕೊಂಡು ಕರ್ನಾಟಕದಲ್ಲಿಯೇ ಬಿದ್ದಿರುತ್ತದೆ ಎಂದು ಪುಂಖಾನುಪುಂಖವಾಗಿ ಮಾತನಾಡಿದ ಬಿಜೆಪಿ ನಾಯಕರು ರಾಜ್ಯದ ಜನತೆಯ ಪ್ರಾಣ ಹೋಗುತ್ತಿದ್ದರೂ ಈಗ ನೋಟ್ ಪ್ರಿಂಟ್ ಮಾಡಲ್ಲ, ನೇಣು ಹಾಕ್ಕೋಬೇಕಾ ಎಂಬ ಮಾತುಗಳನ್ನ ಆಡುತ್ತಿರುವುದೇಕೆ? ಡಕೋಟಾ ಇಂಜಿನ್ ಅಂತ ಈಗ ಅರಿವಾಯಿತೆ?!" ಎಂದಿದೆ.
"ಬಿಎಸ್ವೈ ಅವರೇ, ನಿಮ್ಮದೆಂತಹಾ ಆಮೆ ನಡಿಗೆಯ ಸರ್ಕಾರವೆಂದರೆ ಸಮಸ್ಯೆಗಳು, ಕೊರತೆಗಳು ತಲೆದೂರಿ ಹಲವು ದಿನಗಳ ಬಳಿಕ ಕೊರತೆಗಳ ನಿರ್ವಹಣೆಗೆಂದು ಕರೋನಾ ಸಚಿವರುಗಳನ್ನು ನೇಮಿಸಿದಿರಿ. ಅವರು ನಾಮಕಾವಸ್ಥೆಗಷ್ಟೇ ಇರುವುದು ಎಂದು ಇಷ್ಟು ದಿನ ಕಳೆದರೂ ಕೊರತೆಗಳು ಬಗೆಹರಿಯದಿರುವುದು ತಿಳಿಸುತ್ತದೆ. ಏಕೆ ಈ ಅಸಾಮರ್ಥ್ಯ ಬಿಎಸ್ವೈ ಅವರೇ? ಕಾಳ ಸಂತೆ ನಿಗ್ರಹಿಸಲು ಗೃಹ ಇಲಾಖೆ, ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿವೆ. ಕಾಳದಂಧೆಕೊರರು ಜೀವ ರಕ್ಷಕ ಔಷಧಗಳ ಕೃತಕ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಾ ತಿಂಗಳು ಕಳೆದಿದೆ, ಇದುವರೆಗೂ ಅದನ್ನು ತಡೆಯುವ ಗಂಭೀರ ಪ್ರಯತ್ನ ಮಾಡಲಿಲ್ಲವೇಕೆ? ಬಿಜೆಪಿ ಪಕ್ಷವೂ ಅದರಲ್ಲಿ ಭಾಗಿಯೇ?" ಎಂದು ಪ್ರಶ್ನಿಸಿದೆ.